

ನವದೆಹಲಿ: ರಾಜಧಾನಿ ದೆಹಲಿ ಸೇರಿದಂತೆ ದೇಶದ ಪ್ರಮುಖ 8 ರಾಜ್ಯಗಳ ಮೇಲೆ ಉಗ್ರರಿಂದ ಸಂಭಾವ್ಯ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ರವಾನಿಸಿದೆ.
ದೆಹಲಿ, ರಾಜಸ್ತಾನ, ಪಂಜಾಬ್ ಸೇರಿದಂತೆ ದೇಶದ ಒಟ್ಟು 8 ರಾಜ್ಯಗಳ ಪ್ರಮುಖ ಧಾರ್ಮಿಕ ಕ್ಷೇತ್ರಗಳು ಮತ್ತು ಪ್ರವಾಸಿ ತಾಣಗಳನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಭಾನುವಾರ ಎಚ್ಚರಿಕೆ ನೀಡಿದೆ. ಪ್ರಮುಖವಾಗಿ ಅಜ್ಮೀರ್, ಜೋಧ್ ಪುರ, ಜೈಪುರದಂತಹ ಐತಿಹಾಸಿಕ ಪ್ರದೇಶಗಳು, ಪ್ರವಾಸಿ ತಾಣಗಳು ಮತ್ತು ಹೆಚ್ಚು ಜನರು ಸೇರುವ ಧಾರ್ಮಿಕ ಕ್ಷೇತ್ರಗಳೇ ಉಗ್ರರ ಗುರಿಯಾಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಗುಪ್ತಚರ ಇಲಾಖೆಯ ಎಚ್ಚರಿಕೆ ರವಾನೆಯಾಗುತ್ತಿದ್ದಂತೆಯೇ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದ್ದು, ಪ್ರವಾಸಿ ತಾಣಗಳು, ರೈಲ್ವೇ ನಿಲ್ದಾಣಗಳು, ಬಸ್ ನಿಲ್ದಾಣಗಳು, ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲಿಯೂ ಭದ್ರತೆಯನ್ನು ಹೆಚ್ಚಿಸಿದೆ. ಅಲ್ಲದೆ ಮಾಲ್ ಗಳಲ್ಲಿನ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚನೆ ನೀಡಲಾಗಿದೆ.
ಕಳೆದ ಗುರುವಾರವಷ್ಟೇ ಐಒಸಿ ಅಧಿಕಾರಿಯೊಬ್ಬರನ್ನು ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇರೆಗೆ ರಾಜಸ್ತಾನದಲ್ಲಿ ಬಂಧಿಸಲಾಗಿತ್ತು. ರಾಜಸ್ತಾನದಲ್ಲಿ ಕಾರ್ಯಾಚರಣೆ ನಡೆಸಿದ್ದ ವಿಶೇಷ ತನಿಖಾ ದಳ (ಎಸ್ ಒಜಿ) ಹಾಗೂ ಎಟಿಎಸ್ ಅಧಿಕಾರಿಗಳು ರಾಜಸ್ತಾನ ಮೂಲದ ಮಹಮದ್ ಸಿರಾಜುದ್ದೀನ್ ಎಂಬಾತನನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಉಗ್ರ ಸಂಭಾವ್ಯ ದಾಳಿ ಕುರಿತು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.