

ಐಜ್ವಾಲ್: ಮಿಜೋರಾಂ, ದೇಶದಲ್ಲೇ ಅತಿ ಹೆಚ್ಚು ತಂಬಾಕು ಉತ್ಪನ್ನಗಳ ಬಳಕೆ ಮಾಡುವ ರಾಜ್ಯವಾಗಿದ್ದು ರಾಜ್ಯದ ಜನಸಂಖ್ಯೆಯ ಶೇ.62 .7 ರಷ್ಟು ಜನರು ಧೂಮಪಾನ ಸೇರಿದಂತೆ ವಿವಿಧ ರೀತಿಗಳಲ್ಲಿ ತಂಬಾಕು ಸೇವನೆ ಮಾಡುತ್ತಿದ್ದಾರೆ.
ಮಿಜೋರಾಂ ರಾಜ್ಯ ತಂಬಾಕು ನಿಯಂತ್ರಣ ಸೊಸೈಟಿ ನೀಡಿರುವ ಅಂಕಿ- ಅಂಶದ ಪ್ರಕಾರ ದೇಶದದ ಶೇ.32 .1 ರಷ್ಟು ಪುರುಷರು ತಂಬಾಕು ಉತ್ಪನ್ನ ಬಳಸುತ್ತಿದ್ದರೆ ಮಿಜೋರಾಂ ನಲ್ಲಿ ಶೇ.73 .6 ರಷ್ಟು ಪುರುಷರು ತಂಬಾಕು ಬಳಸುತ್ತಾರೆ ಎಂದು ತಿಳಿದುಬಂದಿದೆ. ಇದು ನೇರವಾಗಿ ಧೂಮಪಾನ ಮಾಡುವವರ ಕುರಿತಾದ ಮಾಹಿತಿಯಾದರೆ, ಇನ್ನು ಧೂಮಪಾನ ಮಾಡದೇ ಇರುವ ಶೇ.62 ರಷ್ಟು ಜನರು ಪ್ಯಾಸಿವ್ ಸ್ಮೋಕಿಂಗ್(ಪರೋಕ್ಷ ಧೂಮಪಾನ) ಕ್ಕೊಳಗಾಗುತ್ತಿದ್ದಾರೆ ಎಂದು ಎಂಎಸ್ ಟಿ ಸಿಎಸ್ ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮಹಿಳೆಯರೂ ಸಹ ಅತಿ ಹೆಚ್ಚು ತಂಬಾಕು ಸೇವನೆ ಮಾಡುವುದು ಕಂಡುಬಂದಿದ್ದು, ಶೇ.16 .1 ಮಹಿಳೆಯರು ತಂಬಾಕು ಸೇವನೆ ಮಾಡುತ್ತಾರಂತೆ. ಅತಿ ಹೆಚ್ಚು ತಂಬಾಕು ಸೇವನೆ ಮಾಡುವ ಪರಿಣಾಮವೆಂಬಂತೆ ಭಾರತದಲ್ಲಿ ಅತಿ ಹೆಚ್ಚು ಕ್ಯಾನ್ಸರ್ ರೋಗಿಗಳು ಇರುವುದೂ ಸಹ ಮಿಜೋರಾಂ ನಲ್ಲೇ. 5 ,888 ಜನರು ಕ್ಯಾನ್ಸರ್ ನಿಂದ ಬಳಲುತ್ತಿದ್ದರೆ 3 ,137 ಜನರು ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ.
ತಂಬಾಕು ಅತಿ ಹೆಚ್ಚು ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ 2009 ರಿಂದ ಮಿಜೋರಾಂ ರಾಜ್ಯ ಸರ್ಕಾರ ತಂಬಾಕು ವಿರೋಧಿ ಅಭಿಯಾನ ಪ್ರಾರಂಭಿಸಿದೆ.