ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ವಾಕ್ಸಮರ ಮುಂದುವರೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ವಿರೋಧ ಪಕ್ಷಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿ ಕೇಂದ್ರ ಸರ್ಕಾರ ಸಿಬಿಐಗೆ ಆದೇಶ ನೀಡಿದೆ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ನಡೆದ ಅರವಿಂದ್ ಕೇಜ್ರಿವಾಲ್ ಕಚೇರಿ ಮೇಲೆ ಸಿಬಿಐ ದಾಳಿ ಮಾಡಿದ ನಂತರ ಕೇಂದ್ರ ಸರ್ಕಾರ ಮತ್ತು ಕೇಜ್ರಿವಾಲ್ ನಡುವೆ ವಾಗ್ಧಾಳಿಗಳು ನಡೆಯುತ್ತಿವೆ. ಇಂದು ಬೆಳಿಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಅರವಿಂದ್ ಕೇಜ್ರಿವಾಲ್ ಮತ್ತೊಂದು ಆರೋಪ ಮಾಡಿದ್ದಾರೆ. ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವಂತೆ ಸಿಬಿಐಗೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ದೂರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಕೇಜ್ರಿವಾಲ್, ಬಿಹಾರದಲ್ಲಿ ಚುನಾವಣೆ ಸೋಲಿನ ನಂತರ ನರೇಂದ್ರ ಮೋದಿ ಸರ್ಕಾರ ದುರ್ಬಲಗೊಳ್ಳುತ್ತಿದೆ, ಈ ಹಿನ್ನಲೆಯಲ್ಲಿ ವಿಪಕ್ಷಗಳನ್ನು ದುರ್ಬಲಗೊಳಿಸಬೇಕು ಎಂದು ಸಂಚು ರೂಪಿಸಿದೆ ಎಂದು ಅವರು ಆಪಾದಿಸಿದ್ದಾರೆ.
ಆದರೆ, ಕೇಜ್ರಿವಾಲ್ ಆರೋಪವನ್ನು ತಳ್ಳಿ ಹಾಕಿರುವ ಅರುಣ್ ಜೇಟ್ಲಿ, ಅಸ್ಪಷ್ಟ ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.