ರಾಜ್ಯದಲ್ಲಿ ರಹಸ್ಯ ಬೃಹತ್ ಅಣು ಯೋಜನೆ?

ಕರ್ನಾಟಕದ ರಹಸ್ಯ ಪ್ರದೇಶವೊಂದರಲ್ಲಿ ಭಾರತ ಸರ್ಕಾರ ಬೃಹತ್ ಹಾಗೂ ಉತ್ಕೃಷ್ಟ ಅಣು ಸ್ಥಾವರ ನಿರ್ಮಾಣ ಮಾಡುತ್ತಿದೆ ಎಂದು ಅಂತಾರಾಷ್ಟ್ರೀಯ ನಿಯತಕಾಲಿಕೆಯೊಂದು ವರದಿ ಮಾಡಿದೆ...
ಬೃಹತ್ ಅಣು ಸ್ಥಾವರ (ಸಂಗ್ರಹ ಚಿತ್ರ)
ಬೃಹತ್ ಅಣು ಸ್ಥಾವರ (ಸಂಗ್ರಹ ಚಿತ್ರ)

ಬೆಂಗಳೂರು: ಕರ್ನಾಟಕದ ರಹಸ್ಯ ಪ್ರದೇಶವೊಂದರಲ್ಲಿ ಭಾರತ ಸರ್ಕಾರ ಬೃಹತ್ ಹಾಗೂ ಉತ್ಕೃಷ್ಟ ಅಣು ಸ್ಥಾವರ ನಿರ್ಮಾಣ ಮಾಡುತ್ತಿದೆ ಎಂದು ಅಂತಾರಾಷ್ಟ್ರೀಯ ನಿಯತಕಾಲಿಕೆಯೊಂದು ವರದಿ ಮಾಡಿದೆ.

ಫಾರಿನ್ ಪಾಲಿಸಿ ಎಂಬ ಅಂತಾರಾಷ್ಟ್ರೀಯ ನಿಯತಕಾಲಿಕೆ ಈ ವರದಿ ಮಾಡಿದ್ದು, ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ಜಲಜನಕ ಬಾಂಬ್ ತಯಾರಿಸುವ ಉದ್ದೇಶದಿಂದ ಭಾರತ ಸರ್ಕಾರ ಈ ಬೃಹತ್ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಪತ್ರಿಕೆ ವರದಿ ಮಾಡಿರುವಂತೆ ಕರ್ನಾಟಕದ ರಹಸ್ಯ ಪ್ರದೇಶದಲ್ಲಿ ಈ ಬೃಹತ್ ಅಣು ಸ್ಥಾವರವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕಾಗಿ ಸುಮಾರು ಸಾವಿರ ಎಕರೆ ಜಾಗ ಮೀಸಲಿಡಲಾಗಿದೆ ಎಂದು ಹೇಳಲಾಗಿದೆ.

ಭಾರತ ಸರ್ಕಾರದ ವತಿಯಿಂದ ಅತ್ಯಂತ ರಹಸ್ಯವಾಗಿ ಈ ಅಣು ಸ್ಥಾವರವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇಲ್ಲಿ ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ಜಲಜನಕ ಬಾಂಬ್ ತಯಾರಿಸುವ ಕನಸನ್ನು ಸಾಕಾರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪತ್ರಕರ್ತ ಆಡ್ರಿಯನ್ ಲೆವಿ ವರದಿ ಉಲ್ಲೇಖಿಸಿ ಫಾರಿನ್ ಪಾಲಿಸಿ ಸುದ್ದಿ ಪ್ರಕಟಿಸಿದೆ. ಕರ್ನಾಟಕ ಸರ್ಕಾರ ಈ ಬೃಹತ್ ಯೋಜನೆಗಾಗಿ ಚಳ್ಳಕೆರೆಯಲ್ಲಿ ಸಾವಿರಾರು ಎಕರೆ ಭೂಮಿಯನ್ನು ರಕ್ಷಣಾ ಮತ್ತು ವಿಜ್ಞಾನ ಇಲಾಖೆಗಳಿಗೆ ಮಂಜೂರು ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಏಷ್ಯಾದಲ್ಲೇ ಅತಿ ದೊಡ್ಡ ರಕ್ಷಣಾ ನಗರವಾಗಿ ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರ ಯತ್ನಿಸುತ್ತಿದೆ. ಹೀಗಾಗಿ ಇಲ್ಲಿ ಅತ್ಯಂತ ಉತ್ಕೃಷ್ಟ ದರ್ಜೆಯ ಬಾಂಬುಗಳನ್ನು ತಯಾರಿಸುವ ಸಾಮರ್ಥ್ಯದ ಪರಮಾಣು ಸ್ಥಾವರವನ್ನು ನಿರ್ಮಿಸಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದೇ ವೇಳೆ ಚಿತ್ರದುರ್ಗದಲ್ಲಿ ಮೊದಲೇ ನೀರಿನ ಅಭಾವವಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಅಣು ಸ್ಥಾವರ ನಿರ್ಮಾಣ ಯೋಜನೆಗೆ ಸ್ಥಳೀಯ ಸಂಘ ಸಂಸ್ಥೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಬೆಂಗಳೂರಿನ ಎನ್ವಿರಾನ್‍ಮೆಂಟ್ ಸಪೋರ್ಟ್ ಗ್ರೂಪ್ ನೇತೃತ್ವದಲ್ಲಿ ಈ ಅಣು ಸ್ಥಾವರದ ವಿರುದ್ಧ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಹಿಂದೆ ಅಮೃತಮಹಲ್ ಕಾವಲ್‍ಗೆಂದು ಮೀಸಲಾಗಿದ್ದ ಜಾಗವನ್ನೆಲ್ಲ ಕರ್ನಾಟಕ ಸರ್ಕಾರ ರಕ್ಷಣಾ ಇಲಾಖೆಗಳಿಗೆ ನೀಡುತ್ತಿದೆ. ಇದರಿಂದ ಈ ಭಾಗದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದಲ್ಲದೇ, ಹೈನುಗಾರಿಕೆ ಹಾಗೂ ಪಶುಸಂಗೋಪನೆಯನ್ನೇ ನೆಚ್ಚಿಕೊಂಡಿರುವ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತವೆ ಎಂದು ಹೋರಾಟ ಶುರುವಾಗಿತ್ತು.

ಅಣು ಸ್ಥಾವರಕ್ಕೆ ವಾಣಿವಿಲಾಸ ಸಾಗರದಿಂದ ನೀರು
ಪರಮಾಣು ಸಂಸ್ಕರಣಾ ಕೆಲಸಕ್ಕೆ ಭಾರಿ ಪ್ರಮಾಣದಲ್ಲಿ ನೀರು ಬೇಕ್ಕಿದ್ದು, ಚಳ್ಳಕೆರೆಯಲ್ಲಿ ಯಾವುದೇ ಜಲಮೂಲಗಳಾಗಲಿ ಅಥವಾ ನದಿಗಳಾಗಲಿ ಇಲ್ಲ. ಆದ್ದರಿಂದ ಸಮೀಪದ ವಾಣಿವಿಲಾಸ  ಸಾಗರದಿಂದ ಪೈಪ್‍ಲೈನ್ ಮೂಲಕ ನೀರು ಸಾಗಿಸಲು 23 ಕೋಟಿಗೂ ಅಧಿಕ ಹಣ ನೀಡಿ ಕರ್ನಾಟಕ ಸರ್ಕಾರದ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಇಲ್ಲಿ ಈಗಾಗಲೇ  ನಿರ್ಮಾಣ ಕಾಮಗಾರಿ ಶುರುವಾಗಿದೆ. ಅದಕ್ಕಾಗಿ ನೂರಾರು ಬೋರ್‍ವೆಲ್‍ಗಳನ್ನು ತೋಡಲಾಗುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ಅಂತರ್ಜಲ ಪಾತಾಳಕ್ಕೆ ಹೋಗಿದೆ ಎಂದು ಫಾರಿನ್ ಪಾಲಿಸಿ  ವರದಿಯಲ್ಲಿ ಹೇಳಲಾಗಿದೆ.

ನೀರಿಲ್ಲದ ಜಾಗದಲ್ಲಿ ಅಣು ಸ್ಥಾವರ ಸ್ಥಾಪನೆ ಹೇಗೆ ಸಾಧ್ಯ?
ಆದರೆ ಸ್ಥಳೀಯ ಜನಪ್ರತಿನಿಧಿಗಳು ಈ ವರದಿಗಳನ್ನು ತಳ್ಳಿ ಹಾಕಿದ್ದು, ಮೊದಲೇ ಚಳ್ಳಕೆರೆಯಲ್ಲಿ ನೀರಿಗೆ ಹಾಹಾಕಾರವಿದೆ. ಅಣು ಸ್ಥಾವರ ಸ್ಥಾಪನೆಗೆ ಸಾಕಷ್ಟು ನೀರಿನ ಅವಶ್ಯಕತೆ ಇದೆ. ಹೀಗಾಗಿ  ಪ್ರಸ್ತುತ ಅಂತಾರಾಷ್ಟ್ರೀಯ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸುದ್ದಿಗಳಲ್ಲಿ ಹುರುಳಿಲ್ಲ ಎಂದು ಜನಪ್ರತಿನಿಧಿಯೊಬ್ಬರು ಹೇಳಿದ್ದಾರೆ.

ಒಟ್ಟಾರೆ ಅಭಿವೃದ್ಧಿಯತ್ತ ಸಾಗುತ್ತಿರುವ ಭಾರತದ ರಕ್ಷಣಾ ವ್ಯವಸ್ಥೆಯ ಮೇಲೆ ಹದ್ದಿನ ಕಣ್ಣಿಟ್ಟಿರುವ ವಿದೇಶಿ ಪತ್ರಕರ್ತರು, ಸಣ್ಣ ಊಹಾಪೋಹಗಳನ್ನು ಕೂಡ ದೊಡ್ಡ ಸುದ್ದಿ ಎಂಬಂತೆ  ಬಿಂಬಿಸುತ್ತಿದ್ದು, ಅವರ ಈ ವರ್ತನೆ ಭಾರತಕ್ಕೆ ಸಂಬಂಧಿಸಿದಂತೆ ಅವರಿಗಿರುವ ಶಂಕೆ ಮತ್ತು ಭಯವನ್ನು ತೋರ್ಪಡಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com