

ನವದೆಹಲಿ: ವಿಶ್ವದಾದ್ಯಂತ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಇಸಿಸ್ ಉಗ್ರ ಸಂಘಟನೆ ಸೇರಲು ಹೋದ ಮೂವರು ವಿದ್ಯಾರ್ಥಿಗಳನ್ನು ನಾಗ್ಪುರ ಉಗ್ರ ನಿಗ್ರಹ ದಳ ಅಧಿಕಾರಿಗಳು ಶನಿವಾರ ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದಬಂದಿದೆ.
ಬಂಧನಕ್ಕೊಳಗಾಗಿರುವ ಮೂವರು ತೆಲಂಗಾಣ ಮೂಲದ ವಿದ್ಯಾರ್ಥಿಗಳೆಂದು ತಿಳಿದುಬಂದಿದ್ದು, ಮೂವರೂ ಜಮ್ಮು ಮತ್ತು ಕಾಶ್ಮೀರದ ಕಡೆಗೆ ಹೋಗುತ್ತಿದ್ದರೆಂದು ಹೇಳಲಾಗುತ್ತಿದೆ.
ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತೆಲಂಗಾಣ ಪೊಲೀಸ್ ಮತ್ತು ಮಹಾರಾಷ್ಟ್ರ ಉಗ್ರ ನಿಗ್ರಹ ದಳದ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆಗಿಳಿದಿದ್ದರು. ಇದರಂತೆ ಇಸಿಸ್ ಕಡೆಗೆ ಆಕರ್ಷಿತರಾಗಿದ್ದ ಮೂವರು ವಿದ್ಯಾರ್ಥಿಗಳನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಬಂಧಿತ ಯುವಕರು ಶುಕ್ರವಾರವಷ್ಟೇ ನಗರಕ್ಕೆ ಬಂದಿದ್ದರು. ಇಂದು ಬೆಳಿಗ್ಗೆ ವಿಮಾನದಲ್ಲಿ ಶ್ರೀನಗರಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದ್ದಾಗ ಎಟಿಎಸ್ ಅಧಿಕಾರಿಗಳು ಬಂಧನಕ್ಕೊಳಪಡಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.