

ಚಂಡೀಗಢ: ಬೆದರಿಕೆ ಇಲ್ಲದಿದ್ದರೂ ತಮಗೂ ವಿವಿಐಪಿ ಭದ್ರತೆಯೇ ಬೇಕು ಎನ್ನುವ ನಾಯಕರೇ ಹೆಚ್ಚು. ಆದರೆ ಅವರೆಲ್ಲರಿಗೂ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಾದರಿಯಾಗಿದ್ದಾರೆ.
ತಮ್ಮ ಭದ್ರತೆಗಾಗಿ ನಿಯೋಜಿತರಾಗಿದ್ದ 130 ಸಿಬ್ಬಂದಿಯನ್ನು ತೆಗೆದು ಹಾಕಿದ್ದಾರೆ. ಸದ್ಯ ಅವರು ಜೆಡ್ ವರ್ಗದ ಭದ್ರತೆ ಹೊಂದಿದ್ದಾರೆ. ಸಿಬ್ಬಂದಿ ಪ್ರಮಾಣ ತಗ್ಗಿಸುವ ಮೂಲಕ ಸರಳ ಜೀವನ ನಡೆಸಲು ಮುಂದಾಗಿದ್ದಾರೆ. ಜತೆಗೆ ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ ಉಂಟಾಗುವ ಹೊರೆ ತಗ್ಗಿಸುವ ಪ್ರಯತ್ನ ಮಾಡಿದ್ದಾರೆ.
ಒಟ್ಟಾರೆಯಾಗಿ ಭದ್ರತಾ ಕೆಲಸಕ್ಕಾಗಿ ನಿಯೋಜಿತರಾಗಿದ್ದ 730 ಮಂದಿ ಹೆಚ್ಚುವರಿ ಸಿಬ್ಬಂದಿಯನ್ನು ತೆಗೆದು ಹಾಕಲಾಗಿದೆ. ಅದೇ ಮಾದರಿಯನ್ನು ಖಟ್ಟರ್ ಸಂಪುಟದ ಸದಸ್ಯರೂ ಅನುಸರಿಸುತ್ತಿದ್ದಾರೆ.
ಇದರ ಜತೆಗೆ ಹಲವು ಪ್ರಥಮಗಳ ಸರದಾರರಾಗಿರುವ ಖಟ್ಟರ್ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಕುಟುಂಬ ರಹಿತರಾಗಿ ವಾಸಿಸುತ್ತಿದ್ದಾರೆ.
ವಿಮಾನ ಖರೀದಿಗೆ ನಕಾರ: ಭೂಪೀಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿಯ ಪ್ರಯಾಣಕ್ಕಾಗಿ ವಿಮಾನ ಖರೀದಿಗೆ ಮುಂದಾಗಿತ್ತು. ಆ ಪ್ರಸ್ತಾಪವನ್ನೂ ಒಪ್ಪಿಕೊಳ್ಳಲು ಅವರು ನಿರಾಕರಿಸಿದ್ದಾರೆ. ವಿಮಾನ ಖರೀದಿಗಾಗಿ ಬೊಕ್ಕಸದಿಂದ ರು.45 ಕೋಟಿ ವೆಚ್ಚ ಮಾಡಬೇಕಾಗುತ್ತದೆ.
ಸದ್ಯ ರಾಜ್ಯ ಸರ್ಕಾರದ ಉಪಯೋಗಕ್ಕಾಗಿ ಕಿಂಗಏರ್‌ಬಿ-200 ವಿಮಾನ ಮತ್ತು ಹೆಲಿಕಾಫ್ಟರ್ ಇದೆ. ಕಳೆದ ವರ್ಷದ ಮಾರ್ಚ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಇದಾದ ಬಳಿಕ ಅದು ದುರಸ್ತಿಗಾಗಿ ಕಾಯುತ್ತಿದೆ.