

ನವದೆಹಲಿ: ಮಾಜಿ ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಸುನಂದಾ ಪುಷ್ಕರ್ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಇಂದು ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ.
ಮತ್ತೆ ನಾಳೆ ಶಶಿ ತರೂರ್ ವಿಚಾರಣೆ
ಸುನಂದಾ ಪುಷ್ಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಶಶಿ ತರೂರ್ ಅವರನ್ನು ನಾಳೆ ಮತ್ತೆ ವಿಚಾರಣೆಗೊಳಪಡಿಸಲಿದೆ.
ಶಶಿ ತರೂರ್ ರನ್ನು ಪುನಃ ನಾಳೆ ಮತ್ತೆ ವಿಚಾರಣಗೆ ಒಳಪಡಿಸಲಾಗುವುದು ಎಂದು ದೆಹಲಿ ನಗರ ಪೊಲೀಸ್ ಆಯುಕ್ತ ಬಿ.ಎಸ್ ಬಸ್ಸಿ ಸ್ಪಷ್ಟಪಡಿಸಿದ್ದಾರೆ.
ಕಳೆದ ಜನವರಿ 20 ರಂದು ದೆಹಲಿಯ ವಸಂತ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಶಶಿ ತರೂರ್ ಅವರನ್ನು ಸುಮಾರು 4 ಗಂಟೆಗಳ ಕಾಲ ಎಸ್ಐಟಿ ವಿಚಾರಣೆ ನಡೆಸಿತ್ತು. ಆ ಸಂದಭದಲ್ಲಿ 40 ಪ್ರಶ್ನೆಗಳನ್ನು ತರೂರ್ ಅವರಿಗೆ ಪೊಲೀಸರು ಕೇಳಿದ್ದರು.
ಎಸ್‌ಐಟಿ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಶಶಿ ತರೂರ್ ಉತ್ತರ ನೀಡಿದ್ದರು. ಮೂರು ಸುತ್ತುಗಳಲ್ಲಿ ವಿಚಾರಣೆ ನಡೆಸಲಾಗಿತ್ತು. ಹೆಚ್ಚಿನ ಮಾಹಿತಿ ಕಲೆ ಹಾಕುವ ಸಲುವಾಗಿ ಮತ್ತೊಮ್ಮೆ ವಿಚಾರಣೆ ನಡೆಸುವುದಾಗಿ ಎಸ್ಐಟಿ ಅಧಿಕಾರಿಗಳು ತಿಳಿಸಿದ್ದರು.
ಸುನಂದಾ ಪುಷ್ಕರ್ ಅವರ ಮೇಲೆ ಯಾರಿಗಾದರೂ ದ್ವೇಷವಿತ್ತೆ?, ಸಾವಿಗೂ ಮುನ್ನ ನಿಮ್ಮ ಸಂಬಂಧ ಹೇಗಿತ್ತು? ಹೀಗೆ ಮುಂತಾದ ಪ್ರಶ್ನೆಗಳನ್ನು ಎಸ್‌ಐಟಿ ಅಧಿಕಾರಿಗಳು ಶಶಿ ತರೂರ್ ಗೆ ಕೇಳಿದ್ದರು. ಇದಕ್ಕೆ ತರೂರ್ ಸುನಂದಾ ಮೇಲೆ ಯಾರಿಗೆ ದ್ವೇಷವಿತ್ತು? ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಉತ್ತರಿಸಿದ್ದರು.
ಸುನಂದಾ ಪುಷ್ಕರ್ ಅವರ ಸಾವಿಗೆ ಐಪಿಎಲ್ ಹಗರಣದ ನಂಟಿದೆಯೇ? ಎಂಬ ಬಗ್ಗೆಯೂ ಪ್ರಶ್ನೆಗಳನ್ನು ಕೇಳಿ ತರೂರ್ ಅವರಿಂದ ಮಾಹಿತಿ ಪಡೆಯಲಾಗಿದೆ. ಸಾವಿಗೂ ಮುನ್ನಾ ಸುನಂದಾ ಅವರ ಮಾನಸಿಕ ಸ್ಥಿತಿ ಹೇಗಿತ್ತು, ಅವರು ಹೇಗೆ ವರ್ತಿಸುತ್ತಿದ್ದರು? ಎಂಬ ಬಗ್ಗೆಯೂ ತರೂರ್ ಅವರಿಗೆ ಪ್ರಶ್ನೆಗಳನ್ನು ಕೇಳಲಾಗಿದೆ.