

ಭೋಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಭಾರಿ ಹಗರಣದ ಆರೋಪ ಕೇಳಿಬಂದಿದೆ.
ಸರ್ಕಾರದ ಪ್ರಮುಖ ಇಲಾಖೆಗಳ ನೇಮಕಕ್ಕೆ ನಡೆಯುವ ಪರೀಕ್ಷೆಯಲ್ಲಿ ದೊಡ್ಡ ಗೋಲ್ ಮಾಲ್ ನಡೆದಿದ್ದು, ಇದರಲ್ಲಿ ಮುಖ್ಯಮಂತ್ರಿ ಚೌಹಾಣ್ ಅವರ ಪಾತ್ರವಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ.
ಸರ್ಕಾರಕ್ಕೆ ವೈದ್ಯಕೀಯ ಅಧಿಕಾರಿ, ಎಂಜಿನಿಯರ್‍ಗಳು ಹಾಗೂ ಆಡಿಟರ್‍ಗಳ ನೇಮಕ ಮಾಡುವ ಕೆಲಸವನ್ನು ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ ನಿರ್ವಹಿಸುತ್ತದೆ. ಆದರೆ ಇಲ್ಲಿ ದೊಡ್ಡ ಹಗರಣ ನಡೆದಿದ್ದು, ಕೆಲವು ಅಭ್ಯರ್ಥಿಗಳು ಪರೀಕ್ಷೆ ಬರೆಯದೇ ಇರಲು ಸರ್ಕಾರಕ್ಕೆ ಲಂಚ ನೀಡಿದ್ದಾರೆ. ಲಂಚ ಪಡೆದ ಮಂಡಳಿಯು ಅಂತಹ ಅಭ್ಯರ್ಥಿಗಳ ಹೆಸರನ್ನು ಪರೀಕ್ಷೆ ಬರೆದಿರುವವರ ಪಟ್ಟಿಯಲ್ಲಿ ಹಾಕಿದೆ ಎನ್ನುವುದು ಕಾಂಗ್ರೆಸ್‍ನ ಆರೋಪ. ಅಷ್ಟೇ ಅಲ್ಲ, ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನೂ ಸರ್ಕಾರ ನಾಶ ಮಾಡಿದೆ. ಹೀಗಾಗಿ ಸಿಎಂ ಚೌಹಾಣ್‍ರನ್ನು ಸಿಬಿಐ ವಿಚಾರಣೆಗೊಳಪಡಿಸಬೇಕು ಎಂದು ಕೈ ನಾಯಕರು ಆಗ್ರಹಿಸಿದ್ದಾರೆ.
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಚೌಹಾಣ್, ಇದೊಂದು ಆಧಾರರಹಿತ ಆರೋಪ. ಒಬ್ಬ ಸಾಮಾನ್ಯ ವ್ಯಕ್ತಿ ಸಿಎಂ ಹುದ್ದೆಗೇರಿರುವುದನ್ನು ಕಾಂಗ್ರೆಸ್‍ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಈ ರೀತಿಯ ಸುಳ್ಳು ಆರೋಪ ಮಾಡುತ್ತಿದೆ ಎಂದಿದ್ದಾರೆ.