

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಜತೆಗೂಡಿ ಸರ್ಕಾರ ರಚಿಸುವ ಬಗ್ಗೆ ಪಿಡಿಪಿ ನಾಯಕಿ ದಿನಕ್ಕೊಂದು ಹೇಳಿಕೆ ನೀಡಲಾರಂಭಿಸಿದ್ದಾರೆ.
ಸೋಮವಾರದಿಂದ ಅಧಿಕೃತವಾಗಿ ಈ ಬಗ್ಗೆ ಮಾತುಕತೆ ನಡೆಸಲಾಗುತ್ತದೆ ಎಂದು ಹೇಳಿದ್ದರು. ಆದರೆ ಭಾನುವಾರ ತಮ್ಮ ನಿಲುವು ಬದಲಾಯಿಸಿದ್ದು, ಅಂಥ ಯೋಚನೆಯೇ ಇಲ್ಲ. ಆ ನಿಟ್ಟಿನಲ್ಲಿ ಚಿಂತನೆಯೇ ನಡೆದಿಲ್ಲ. ಜಮ್ಮು-ಕಾಶ್ಮೀರದ ಜನರಿಗೆ ನೀಡಿದ ವಾಗ್ದಾನ ಮರೆಯುವುದಿಲ್ಲ ಎಂದಿದ್ದಾರೆ. ಸರ್ಕಾರ ರಚನೆ ನಿಟ್ಟಿನಲ್ಲಿ ಪಕ್ಷಕ್ಕೆ ಯಾವುದೇ ಆತುರ ಇಲ್ಲ ಎಂದಿದ್ದಾರೆ ಮೆಹಬೂಬಾ.
ಭಾನುವಾರ ನಡೆದ ಪಕ್ಷದ ಶಾಸಕರ ಸಭೆಯಲ್ಲಿ ಬಿಜೆಪಿ ಜತೆಗಿನ ಮೈತ್ರಿಯಿಂದಾಗಿ ಪಕ್ಷದ ವರ್ಚಸ್ಸು ಮತ್ತು ನಿಲುವುಗಳ ಬಗ್ಗೆ ಕಾಶ್ಮೀರ ಕಣಿವೆಯ ಜನರಲ್ಲಿ ತಪ್ಪು ಭಾವನೆ ಮೂಡಿಸುವ ಸಾಧ್ಯತೆ ಇದೆ ಎಂದು ಮತ್ತೊಮ್ಮೆ ಮೆಹಬೂಬಾ ಮುಫ್ತಿ ಮತ್ತು ಮುಫ್ತಿ ಮೊಹಮ್ಮದ್ ಸಯ್ಯೀದ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಜತೆಗೆ ಶಾಸಕರ ಕ್ಷೇತ್ರಗಳಲ್ಲಿ ಪ್ರತಿಕೂಲ ಪರಿಸ್ಥಿತಿ ಮೂಡುವಂತಾದೀತು ಎಂದು ಎಚ್ಚರಿಕೆ ನೀಡಿದ್ದರು. ಇದಾದ ಬಳಿಕ ಪಿಡಿಪಿ ನಾಯಕಿ ಉಲ್ಟಾ ಹೊಡೆದಿದ್ದಾರೆ.