ರಾಷ್ಟ್ರಗೀತೆಗೆ ಅಪಮಾನ: ಉಪರಾಷ್ಟ್ರಪತಿ ಕಾರ್ಯಾಲಯದ ಸ್ಪಷ್ಟನೆ

ಗಣರಾಜ್ಯೋತ್ಸವ ವೇಳೆ ರಾಷ್ಟ್ರಗೀತೆಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪರಾಷ್ಟ್ರಪತಿ ಸಚಿವಾಲಯವು ಮಂಗಳವಾರ ಸ್ಪಷ್ಟನೆ ನೀಡಿದೆ.
ಗಣರಾಜ್ಯೋತ್ಸವದ ಧ್ವಾಜಾರೋಹಣದ ವೇಳೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ (ಸಂಗ್ರಹ ಚಿತ್ರ)
ಗಣರಾಜ್ಯೋತ್ಸವದ ಧ್ವಾಜಾರೋಹಣದ ವೇಳೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಗಣರಾಜ್ಯೋತ್ಸವ ವೇಳೆ ರಾಷ್ಟ್ರಗೀತೆಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪರಾಷ್ಟ್ರಪತಿ ಸಚಿವಾಲಯವು ಮಂಗಳವಾರ ಸ್ಪಷ್ಟನೆ ನೀಡಿದೆ.

'ಶಿಷ್ಟಾಚಾರದ ಪ್ರಕಾರ ಧ್ವಜಾರೋಹಣದ ವೇಳೆ ಉಪರಾಷ್ಟ್ರಪತಿಗಳು ಪಾಲಿಸಬೇಕಾದ ಎಲ್ಲ ಕರ್ತವ್ಯಗಳನ್ನು ಪಾಲಿಸಿದ್ದಾರೆ. ರಾಷ್ಟ್ರಪತಿಗಳ ಉಪಸ್ಥಿತಿ ವೇಳೆ ನಡೆಯುವ ಧ್ವಜಾರೋಹಣ ಅಥವಾ ರಾಷ್ಟ್ರಗೀತೆಯನ್ನು ಹಾಡುವ ವೇಳೆ ಉಪರಾಷ್ಟ್ರಪತಿಗಳು ಎದ್ದುನಿಂತು ಗೌರವ ಸೂಚಿಸುವುದು ಶಿಷ್ಟಾಚಾರ ಅದನ್ನು ಹಮೀದ್ ಅನ್ಸಾರಿ ಅವರು ಪಾಲಿಸಿದ್ದಾರೆ' ಎಂದು ಉಪರಾಷ್ಟ್ರಪತಿಗಳ ಕಾರ್ಯಾಲಯ ಸ್ಪಷ್ಟನೆ ನೀಡಿದೆ.

ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿರುವ ಉಪರಾಷ್ಟ್ರಪತಿಗಳ ವಿಶೇಷ ಅಧಿಕಾರಿ ಮತ್ತು ರಾಜ್ಯಸಭಾ ಟಿವಿ ಸಂಪಾದಕರಾದ ಗುರ್‌ದೀಪ್ ಸಿಂಗ್ ಸಪ್ಪಲ್ ಅವರು, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಯಾವುದೇ ರೀತಿಯಲ್ಲಿಯೂ ಶಿಷ್ಟಾಚಾರವನ್ನು ಉಲ್ಲಂಘಿಸಿಲ್ಲ.

ರಾಷ್ಟ್ರಪತಿಗಳ ಉಪಸ್ಥಿತಿಯಲ್ಲಿ ವಿಶೇಷ ಆಹ್ವಾನಿತರು ಮತ್ತು ಸಮವಸ್ತ್ರದಲ್ಲಿರುವ ಅಧಿಕಾರಿಗಳು ಧ್ವಜಾರೋಹಣದ ವೇಳೆ ಸೆಲ್ಯೂಟ್ ಮಾಡಬೇಕು ಮತ್ತು ಸಾಮಾನ್ಯ ಉಡುಗೆ ಅಥವಾ ನಾಗರೀಕ ಉಡುಗೆಯಲ್ಲಿರುವವರು ಎದ್ದು ನಿಂತು ಗೌರವ ಸಲ್ಲಿಸಬೇಕು ಎಂದು ಹೇಳಿದ್ದಾರೆ.

ನಿನ್ನೆ ನವದೆಹಲಿಯ ರಾಜ್‌ಪಥ್‌ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಧ್ವಜಾರೋಹಣದ ವೇಳೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸೆಲ್ಯೂಟ್ ಮಾಡಿರಲಿಲ್ಲ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ವ್ಯಾಪಕ ಪ್ರಚಾರ ಪಡೆದುಕೊಂಡಿತ್ತು.

ಅಲ್ಲದೇ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಇಂದು ಉಪರಾಷ್ಟ್ರಪತಿ ಸಚಿವಾಲಯವು ಸ್ಪಷ್ಟನೆ ನೀಡಿದ್ದು, ಹಮೀದ್ ಅನ್ಸಾರಿ ಅವರು ಶಿಷ್ಟಾಚಾರವನ್ನು ಉಲ್ಲಂಘಿಸಿಲ್ಲ ಎಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com