

ನವದೆಹಲಿ: ವ್ಯಾಪಂ ಹಗರಣವನ್ನು ಸಿಬಿಐ ತನಿಖೆಗೊಪ್ಪಿಸುವಂತೆ ಸುಪ್ರೀಂಕೋರ್ಟ್ ಬಳಿ ಮನವಿ ಮಾಡಿಕೊಳ್ಳಲಾಗುವುದೆಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬುಧವಾರ ಹೇಳಿದ್ದಾರೆ.
ವ್ಯಾಪಂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನಾಸ್ಪದ ಸಾವುಗಳ ಸಂಖ್ಯೆ ಹೆಚ್ಚುತ್ತಿದ್ದು, ಪ್ರಕರಣ ದೇಶದಾದ್ಯಂತ ಚರ್ಚೆಯಾಗುತ್ತಿದೆ. ಪ್ರಕರಣ ಸಂಬಂಧ ವಿರೋಧ ಪಕ್ಷಗಳು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದು, ಸಿಬಿಐ ತನಿಖೆಗೊಪ್ಪಿಸುವಂತೆ ಆಗ್ರಹಿಸಿದ್ದವು. ಹೀಗಾಗಿ ಒತ್ತಡಕ್ಕೆ ಮಣಿದಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರು ನಿನ್ನೆಯಷ್ಟೇ ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೊಪ್ಪಿಸಲು ಒಪ್ಪಿಕೊಂಡಿದ್ದರು. ಆದರೆ, ಚೌಹಾಣ್ ಸಿಂಗ್ ಅವರು ಈ ಒಪ್ಪಿಗೆಯನ್ನು ಮಧ್ಯಪ್ರದೇಶ ಹೈ ಕೋರ್ಟ್ ತಿರಸ್ಕರಿಸಿತ್ತು. ಅಲ್ಲದೆ, ಸುಪ್ರೀಂಕೋರ್ಟ್ ಆಜ್ಞೆ ಇಲ್ಲದೆ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಇದೀಗ ಪ್ರಕರಣ ಸಂಬಂದ ಶಿವರಾಜ್ ಸಿಂಗ್ ಚೌಹಾಣ್ ಅವರು ದೆಹಲಿಗೆ ಹೋಗಿದ್ದು, ತನಿಖೆಯನ್ನು ಸಿಬಿಐ ತನಿಖೆಗೊಪ್ಪಿಸುವಂತೆ ಮನವಿ ಮಾಡಲಿದ್ದಾರೆ ಮತ್ತು ಈ ಕುರಿತಂತೆ ಬಿಜೆಪಿ ವರಿಷ್ಟರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಕುರಿತಂತೆ ದೆಹಲಿಯಲ್ಲಿ ಮಾತನಾಡಿರುವ ಅವರು, ಪ್ರಕರಣ ಸಂಬಂಧ ಕಾಂಗ್ರೆಸ್ ಪಕ್ಷದವರು ಮೊದಲಿನಿಂದಲೂ ಪ್ರಚಾರ ಮಾಡುತ್ತಲೇ ಬಂದಿದ್ದು, ಹಿಂದಿನಿಂದಲೂ ನನ್ನ ರಾಜಿನಾಮೆ ಕೇಳುತ್ತಲೇ ಬಂದಿದೆ ಎಂದು ಹೇಳಿದ್ದು ಕಾಂಗ್ರೆಸ್ ವಿರುದ್ಧ ಚೌಹಾಣ್ ಕಿಡಿಕಾರಿದ್ದಾರೆ.