

ನವದೆಹಲಿ: ಪಕ್ಷದ ವಿರುದ್ಧವೇ ಬಂಡಾಯವೆದ್ದು, ಆಮ್ ಆದ್ಮಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್ ಅವರು ಪಕ್ಷಕ್ಕೆ ಮರುಸೇರ್ಪಡೆಗೊಂಡರೆ ಬಹಳ ಸಂತೋಷವಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ ಹೇಳಿದ್ದಾರೆ.
ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್ ಅವರನ್ನು ಮರುಸೇರ್ಪಡೆಗೊಳಿಸಲು ಆಮ್ ಆದ್ಮಿ ಪಕ್ಷದ ಸಚಿವರಿಂದ ಹಲವು ವಿರೋಧಗಳಿವೆ ವ್ಯಕ್ತವಾಗುತ್ತಿವೆ ಎಂದು ಹೇಳಲಾಗುತ್ತಿತ್ತು. ಈ ಕುರಿತಂತೆ ಇಂದು ನವದೆಹಲಿಯಲ್ಲಿ ಸ್ಪಷ್ಟನೆ ನೀಡಿರುವ ಕೇಜ್ರಿವಾಲ್ ಅವರು, ಭೂಷಣ್ ಹಾಗೂ ಯಾದವ್ ಅವರನ್ನು ಪಕ್ಷಕ್ಕೆ ಮರುಸೇರ್ಪಡೆಗೊಳಿಸಲು ಪಕ್ಷದಲ್ಲಿ ಯಾವುದೇ ವಿರೋಧವಿಲ್ಲ. ಅವರಿಬ್ಬರೂ ಮರುಸೇರ್ಪಡೆಗೊಂಡರೆ ಪಕ್ಷಕ್ಕೆ ಒಳ್ಳೆಯದು ಹಾಗೂ ಇದರಿಂದ ನನಗೆ ಬಹಳ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪಕ್ಷದ ಹಲವರ ವಿರುದ್ಧ ಹಾಗೂ ದೆಹಲಿ ವಿಧಾನಸಭೆ ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್ ಅವರನ್ನು ಏ.21 ರಂದು ಪಕ್ಷದಿಂದ ಉಚ್ಛಾಟನೆಗೊಳಿಸಲಾಗಿತ್ತು. ಉಚ್ಛಾಟನೆಗೊಂಡ ನಂತರ ಇಬ್ಬರು ನಾಯಕರು ಆಮ್ ಆದ್ಮಿ ಪಕ್ಷದ ಆದರ್ಶಗಳನ್ನು ಮರುಕಳಿಸುವ ಸಲುವಾಗಿ ಸ್ವರಾಜ್ ಅಭಿಯಾನ ಎಂಬ ಹೊಸ ಚಳುವಳಿಯೊಂದನ್ನು ಆರಂಭಿಸಿದ್ದರು.