

ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವೆ ಈಗ ಮತ್ತೊಂದು ಸುತ್ತಿನ ಜಂಗೀಕುಸ್ತಿ ಆರಂಭವಾಗಿದೆ.
ದೆಹಲಿ ಸರ್ಕಾರ ಸ್ವಾತಿ ಮಲಿವಾಲ್ ಅವರನ್ನು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಿತ್ತು. ಆದರೆ ಈ ಸಂಬಂಧ ಸರ್ಕಾರ ತಮ್ಮ ಒಪ್ಪಿಗೆ ಪಡೆದಿಲ್ಲ ಎಂದಿರುವ ನಜೀಬ್ ಜಂಗ್, ಮಲಿವಾಲ್ ನೇಮಕ ಅಕ್ರಮ ಎಂದು ಹೇಳಿದ್ದಾರೆ.
ಈ ಹಿಂದೆ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ನಜೀಬ್ ಜಂಗ್ ನಡುವೆ ಭಾರಿ ಜಟಾಪಟಿ ನಡೆದಿತ್ತು.
ಮಲಿವಾಲ್ ನೇಮಕ ಸಂಬಂಧ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿರುವ ನಜೀಬ್ ಜಂಗ್, ಕಾನೂನು ಪ್ರಕಾರ ಈ ನೇಮಕಕ್ಕೆ ಲೆಫ್ಟಿನೆಂಟ್ ಗವರ್ನರ್ ಅನುಮೋದನೆ ಪಡೆದಿಲ್ಲ. ಹೀಗಾಗಿ ಇದು ಕಾನೂನು ಬಾಹಿರ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಮಲಿವಾಲ್, 'ಈ ಸಂಬಂಧ ಲೆಫ್ಟಿನೆಂಟ್ ಗವರ್ನರ್ ಕಚೇರಿ ಅಥವಾ ಸರ್ಕಾರದಿಂದ ನನಗೆ ಯಾವುದೇ ಮಾಹಿತಿ ಬಂದಿಲ್ಲ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ' ಎಂದು ಹೇಳಿದ್ದಾರೆ. ಮಲಿವಾಲ್ ಅವರು ಎಎಪಿ ನಾಯಕ ನವೀನ್ ಜೈಹಿಂದ್ ಅವರ ಪತ್ನಿ.