

ನವದೆಹಲಿ: ದೆಹಲಿ ವಿಶ್ವ ವಿದ್ಯಾನಿಲಯದ ದೃಷ್ಟಿಹೀನ ಮಹಿಳಾ ಪ್ರೊಫೆಸರ್, ತಾನು ಮುಸ್ಲಿಂ ಎಂಬ ಕಾರಣಕ್ಕೆ ದೆಹಲಿಯಲ್ಲಿ ಯಾರೂ ಬಾಡಿಗೆ ಮನೆ ನೀಡಲಿಲ್ಲ ಎಂದು ಕಣ್ಣೀರಿಟ್ಟು ದುಃಖ ತೋಡಿಕೊಂಡಿರುವ ವೀಡಿಯೋ ಸಂದೇಶವೊಂದನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಕಳುಹಿಸಿದ್ದಾರೆ.
ದೆಹಲಿ ವಿವಿಯಲ್ಲಿ ಇಂಗ್ಲಿಷ್ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ರೀಮ್ ಶಂಸುದ್ದೀನ್ ಎಂಬಾಕೆ ತನ್ನ ದುಃಖದ ಮಾತುಗಳ ವೀಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್ ಲೋಡ್ ಮಾಡಿ ಕೇಜ್ರಿವಾಲ್ ರ ಹೆಸರನ್ನು ಪ್ರಸ್ತಾಪಿಸದೇ ಅವರನ್ನು ಪಾಂಚ್ ಸಾಲ್ ಚೀಫ್ ಮಿನಿಸ್ಟರ್ ಎಂದು ಕರೆದಿದ್ದಾಳೆ.
ಈ ವೀಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸಿದ್ದು ಈಗಾಗಲೇ , 3,5000 ಜನರು ಇದನ್ನು ವೀಕ್ಷಿಸಿದ್ದಾರೆ. ಸಾಮಾಜಿಕ ತಾಣದಲ್ಲಿ #Justice4Reem ಎಂಬ ಹ್ಯಾಶ್ ಟ್ಯಾಗ್ ಕೂಡಾ ಟ್ರೆಂಡಿಂಗ್ ಆಗುತ್ತಿದೆ.
ಕೇರಳ ಮೂಲದ ರೀಮ್ ವೀಡಿಯೋ ಸಂದೇಶದಲ್ಲಿ ಹೇಳಿದ್ದು:
ನಾನು ಕಳೆದ ಫೆಬ್ರವರಿ ತಿಂಗಳಲ್ಲಿ ದೆಹಲಿಗೆ ಬಂದೆ. ಕೇಜ್ರಿವಾಲ್ ಮುಖ್ಯಮಂತ್ರಿಯಾದರೆ ದೆಹಲಿಯಲ್ಲಿ ಏನೆಲ್ಲಾ ಬದಲಾವಣೆಗಳು ಆಗಬಹುದು ಎಂಬ ಆಪ್ ಪಕ್ಷದ ಭರವಸೆಗಳು ದೆಹಲಿಯಾದ್ಯಂತ ಕೇಳಿ ಬರುತ್ತಿದ್ದವು. ದೆಹಲಿಯಲ್ಲಿನ ಇತರ ಸಮಸ್ಯೆಗಳು ಮಾತ್ರವಲ್ಲದೆ ತಾರತಮ್ಯದ ಸಮಸ್ಯೆಯನ್ನು ಪಕ್ಷ ಹೇಗೆ ಸಂಭಾಳಿಸುತ್ತದೆ ಎಂಬುದರ ಬಗ್ಗೆಯೂ ಅಲ್ಲಿ ಹೇಳಲಾಗುತ್ತಿತ್ತು.
ಈಗ ನನಗೆ ಆದ ಅನುಭವವನ್ನು ನಾನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಬೇಸಿಗೆ ರಜಾ ನಂತರ ನಾನು ಕಾಲೇಜಿಗೆ ಸೇರಿ, ಅಲ್ಲೇ ಪಕ್ಕದಲ್ಲೊಂದು ಬಾಡಿಗೆ ಫ್ಲಾಟ್ ನೋಡಿದೆ. ಫ್ಲಾಟ್‌ಗೆ ಮುಂಗಡ ಹಣ ನೀಡಿ ನಾನು ಮತ್ತು ನನ್ನ ಅಮ್ಮ ಅಲ್ಲಿಗೆ ಶಿಫ್ಟ್ ಆಗುವುದಾಗಿ ತೀರ್ಮಾನಿಸಿದೆವು.
ನಾನು ನನ್ನ ಎಲ್ಲಾ ಲಗೇಜುಗಳನ್ನು ತೆಗೆದುಕೊಂಡು ಹೊಸ ಫ್ಲಾಟ್‌ಗೆ ಶಿಫ್ಟ್ ಆಗಲು ರೆಡಿಯಾದೆ. ಅಲ್ಲಿಗೆ ತಲುಪಿದಾಗ ಫ್ಲಾಟ್‌ನ ಮಾಲಕಿ ಫ್ಲಾಟ್‌ನ ಕೀ ಕೊಡಲು ನಿರಾಕರಿಸಿದ್ದು, ತಾನು ಮುಸ್ಲಿಂ ವ್ಯಕ್ತಿಗಳಿಗೆ ಬಾಡಿಗೆಗೆ ಮನೆ ಕೊಡುವುದಿಲ್ಲ ಎಂದು ಹೇಳಿದ್ದಾಳೆ. ದೆಹಲಿಯಂಥಾ ಮಹಾನಗರದಲ್ಲಿ ಈ ರೀತಿಯ ಉತ್ತರ ಕೇಳಿ ನಾನು ದಂಗಾಗಿಬಿಟ್ಟೆ. ಹೈದರಾಬಾದ್ ನಲ್ಲಿ ನಾನು 8 ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿದ್ದೆ, ಆದರೆ ಈ ರೀತಿಯ ತಾರತಮ್ಯವನ್ನು ನೋಡಿರಲಿಲ್ಲ.
ನನಗೇ ಈ ರೀತಿ ಅನುಭವವಾಗಿದ್ದರೆ, ಇನ್ನು ದೇಶದ ವಿವಿಧ ಭಾಗದಿಂದ ಇಲ್ಲಿ ಕಲಿಯಲುಬರುವ ಸಾವಿರಾರು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಅವರ ಸ್ಥಿತಿ ಹೇಗಿರಬೇಡ? ನೀವು ದೆಹಲಿಯ ಜನರಿಗೆ ಭರವಸೆ ನೀಡಿದ್ದೀರಿ. ಇಲ್ಲಿ ಬರುವ ಬಿಹಾರಿ, ಬಂಗಾಳಿ, ಮಲಯಾಳಿ, ಮಣಿಪುರಿ, ಕಶ್ಮೀರಿ, ಗೋವಾದವರಿಗೆ, ಕಪ್ಪು, ಬಿಳುಪು, ಮಹಿಳೆ, ಪುರುಷ, ತೃತೀಯ ಲಿಂಗಿ, ಸಲಿಂಗಿ, ಕಿವುಡ, ಕುರುಡ, ಬಿಕಾರಿ ಎಲ್ಲರಿಗೂ ವಾಸಿಸಲು ಅವಕಾಶ ನೀಡುತ್ತೇನೆ ಎಂದು..ಹೀಗಿರುವಾಗ ನಾನು ದೆಹಲಿಯ ಪಾಂಚ್ ಸಾಲ್ ಮುಖ್ಯಮಂತ್ರಿಗೆ ನನ್ನ ಸಮಸ್ಯೆಯ ಬಗ್ಗೆ ಗಮನ ಹರಿಸುವಂತೆ ಬೇಡಿಕೊಳ್ಳುತ್ತಿದ್ದೇನೆ ಎಂದು ರೀಮ್ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.