

ಮುಂಬೈ: ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಪಾಕ್ ಸೈನಿಕರು ಪದೇ ಪದೇ ಅಪ್ರಚೋದಿತ ದಾಳಿ ನಡೆಸುತ್ತಿದ್ದು, ಅವರಿಗೆ ಅವರದ್ದೇ ದಾರಿಯಲ್ಲಿ ಭಾರತೀಯ ಸೈನಿಕರು ತಕ್ಕ ಶಾಸ್ತಿ ಮಾಡಬೇಕು ಎಂದು ಶಿವಸೇನೆ ಹೇಳಿದೆ.
ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಪಾಕಿಸ್ತಾನಿ ಸೈನಿಕರ ವಿರುದ್ಧ ತೀವ್ರ ಕಿಡಿಕಾರಿದೆ. ಪಾಕಿಸ್ತಾನ ಕಾಲುಕೆರೆದು ದಾಳಿ ಮಾಡಿದರೆ ಅದಕ್ಕೆ ಭಾರತೀಯ ಸೈನಿಕರು ತಕ್ಕ ಉತ್ತರ ನೀಡಲೇಬೇಕಾಗುತ್ತದೆ. ಇದು ಯಾವುದೇ ರೀತಿಯಿಂದಲೂ ತಪ್ಪಲ್ಲ. "2013ರಲ್ಲಿ ಪಾಕಿಸ್ತಾನಿ ಸೈನಿಕರು 347 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದರು. ಅದೇ 2014ರಲ್ಲಿ ಈ ಸಂಖ್ಯೆ ಬರೋಬ್ಬರಿ 562ಕ್ಕೇರಿತ್ತು. ಭಾರತದ ಗಡಿ ಪ್ರದೇಶದಲ್ಲಿ ಸುಮಾರು 32 ಸಾವಿರ ಜನರು ವಾಸಿಸುತ್ತಿದ್ದಾರೆ. ಗಡಿಯಲ್ಲಿ ಪದೇ ಪದೇ ಪಾಕಿಸ್ತಾನಿ ಸೈನಿಕರು ಅಶಾಂತಿ ಸೃಷ್ಟಿಸಿದರೆ ಸೂಕ್ತ ನೆಲೆಗಾಗಿ ಅವರು ಎಲ್ಲಿಗೆ ಹೋಗಬೇಕು ಎಂದು ಶಿವಸೇನೆ ಪ್ರಶ್ನಿಸಿದೆ.
ಹೀಗಾಗಿ ಭಾರತೀಯ ಸೇನೆ ಕೂಡ ಪಾಕಿಸ್ತಾನಕ್ಕೆ ಅದರದೇ ದಾರಿಯಲ್ಲಿ ಬಂದೂಕಿನ ಉತ್ತರ ನೀಡಬೇಕು. ಪಾಕಿಸ್ತಾನದಂತಹ ಸಣ್ಣ ದೇಶವೇ ಕಾಲುಕೆರೆದು ಕದನವಿರಾಮ ಉಲ್ಲಂಘನೆ ಮಾಡುತ್ತಿದ್ದರೆ, ಭಾರತ ಕದನ ವಿರಾಮ ಉಲ್ಲಂಘನೆ ಮಾಡಿದರೆ ತಪ್ಪೇನು. ನಮ್ಮ ಗಡಿ ಪ್ರದೇಶವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಮಾಡುವ ಯಾವುದೇ ಪ್ರಯತ್ನ ತಪ್ಪಲ್ಲ ಎಂದು ಹೇಳಿದೆ.
ಅಲ್ಲದೆ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ದಿನೇ ದಿನೇ ಪಾತಾಳಕ್ಕೆ ಇಳಿಯುತ್ತಿದ್ದು, ಆ ದೇಶ ಕೇವಲ ಅಮೆರಿಕ ನೀಡುತ್ತಿರುವ ಆರ್ಥಿಕ ಸಹಾಯದಿಂದಷ್ಟೇ ಬದುಕುತ್ತಿದೆ. ಭಾರತವನ್ನು ಸರ್ವನಾಶ ಮಾಡಲು ಪಾಕಿಸ್ತಾನ ಸೃಷ್ಟಿಸಿದ್ದ ಭಯೋತ್ಪಾದಕರು ಇದೀಗ ಆ ದೇಶವನ್ನೇ ಸುಡುತ್ತಿದ್ದಾರೆ. ಭಾರತದಲ್ಲಿ ಭಯೋತ್ಪಾದಕ ದಾಳಿಗಳು ಗಣನೀಯವಾಗಿ ಕಡಿಮೆಯಾಗಿದ್ದು, ಪಾಕಿಸ್ತಾನದಲ್ಲಿ ನಿತ್ಯ ಒಂದಿಲ್ಲೊಂದು ಉಗ್ರ ದಾಳಿಗಳ ನಡೆಯುತ್ತಿವೆ ಎಂದು ಶಿವಸೇನೆ ಹೇಳಿದೆ.
ನಿನ್ನೆಯಷ್ಟೇ ಕಾಶ್ಮೀರದ ಪೂಂಛ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನಿ ರೇಂಜರ್ಸ್ ಗಳು ಭಾರತೀಯ ಸೈನಿಕರನ್ನು ಗುರಿಯಾಗಿಸಿಕೊಂಡು ರಾಕೆಟ್ ಮತ್ತು ಗ್ರೆನೇಡ್ ದಾಳಿ ನಡೆಸಿದ್ದರು. ಇದಲ್ಲದೆ ಹೀರಾನಗರದಲ್ಲಿರುವ ಬಿಎಸ್ ಎಫ್ ಕ್ಯಾಂಪ್ ಮೇಲೆ ಪಾಕಿಸ್ತಾನಿ ಸೈನಿಕರಿಂದ ನಡೆದಿದ್ದ ಗುಂಡಿನ ದಾಳಿಯಿಂದಾಗಿ ಓರ್ವ ಭಾರತೀಯ ಸೈನಿಕ ಗಂಭೀರವಾಗಿ ಗಾಯಗೊಂಡಿದ್ದನು.