

ನವದೆಹಲಿ: ಸರಿಯಾಗಿ ಕೆಲಸ ಮಾಡಿ ಇಲ್ಲವೇ ಕಠಿಣ ಕ್ರಮ ಎಂದುರಿಸಿ ಎಂದು ದೆಹಲಿ ಅಧಿಕಾರಿಗಳಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಎಚ್ಚರಿಕೆ ನೀಡಿದ್ದಾರೆ.
2 ನೇ ಬಾರಿಗೆ ದೆಹಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಅರವಿಂದ್ ಕೇಜ್ರಿವಾಲ್, ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ಕಡತಗಳ ವಿಲೇವಾರಿಯಾಗದೇ ಉಳಿದಿರುವ ಇರುವ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು ಕ್ಷಿಪ್ರಗತಿಯಲ್ಲಿ ಕೆಲಸ ನಿರ್ವಹಿಸಿ ಇಲ್ಲವೇ ಸರ್ಕಾರ ಕೈಗೊಳ್ಳುವ ಕಠಿಣ ಕ್ರಮ ಎದುರಿಸಲು ತಯಾರಾಗಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತಮ್ಮ ಆದೇಶದಲ್ಲಿ ಕಾರ್ಯಗತಿಯನ್ನು ಸುಧಾರಿಸಲು ಅಧಿಕಾರಿಗಳಿಗೆ ತಿಳಿಸಿದ್ದು, ಹೆಚ್ಚಿನ ಜವಾಬ್ದಾರಿಯನ್ನೂ ನಿರ್ವಹಿಸುವಂತೆ ಸೂಚಿಸಿದ್ದಾರೆ. ಅಧಿಕಾರಿಗಳು ತಮ್ಮ ಇಲಾಖೆಗಳ ಕೆಲಸಗಳ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದೇ ಕೇವಲ ಅಭಿಪ್ರಾಯ ತಿಳಿಸುತ್ತಿದ್ದು ಕಡತ ವಿಲೇವಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಗತಿ ನಿಧಾನವಾಗಿದ್ದು, ಅರವಿಂದ್ ಕೇಜ್ರಿವಾಲ್ ಈ ನಿರ್ಧಾರ ಕೈಗೊಂಡಿದ್ದಾರೆ.
ಇಲಾಖೆಗೆ ಸಂಬಂಧಿಸಿದಂತೆ ಪ್ರತಿ ಅಧಿಕಾರಿಗೂ ತನ್ನ ವ್ಯಾಪ್ತಿಯಲ್ಲಿ ನಿರ್ಧಾರ ಕೈಗೊಳ್ಳುವ ಜವಾಬ್ದಾರಿ ನೀಡಿ, ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಯೋಜನೆ ರೂಪಿಸಬೇಕು ಎಂದು ಕೇಜ್ರಿವಾಲ್ ತಮ್ಮ ಸಂಪುಟ ಸಹೋದ್ಯೋಗಿಗಳಿಗೂ ತಿಳಿಸಿದ್ದಾರೆ.
ಯಾವುದೇ ರೀತಿಯ ದೋಷಗಳು ಕಂಡುಬಂದರೆ ಅದಕ್ಕೆ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲು ಕೇಜ್ರಿವಾಲ್ ಸರ್ಕಾರ ಈ ಚಿಂತನೆ ನಡೆಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲು ದೆಹಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು ಕಾರ್ಯಗತಿಯನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕೆಂದು ಆಡಳಿತಾತ್ಮಕ ಸುಧಾರಣೆ ಇಲಾಖೆಗೆ ಪತ್ರ ಬರೆದಿದೆ.
ಒಂದು ವೇಳೆ ಯಾವುದೇ ಅಕ್ರಮ ನಡೆದರೂ ಅದಕ್ಕೆ ಸರ್ಕಾರಿ ಅಧಿಕಾರಿಗಳನ್ನೇ ನೇರ ಹೊಣೆ ಮಾಡುವ ಉದ್ದೇಶದಿಂದ ಕೇಜ್ರಿವಾಲ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಅಲ್ಲದೇ ಕಡತಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವುದಕ್ಕೆ ಕ್ರಮ ಕೈಗೊಂಡಿದ್ದು, ಕೇವಲ ಮೂರು ಹಂತಗಳಲ್ಲಿ ಕಡತ ವಿಲೇವಾರಿ ಮಾಡಬೇಕೆಂದು ಆಡಳಿತಾತ್ಮಕ ಸುಧಾರಣಾ ಇಲಾಖೆಗೆ ಕೇಜ್ರಿವಾಲ್ ಪತ್ರದಲ್ಲಿ ತಿಳಿಸಿದ್ದಾರೆ.