

ನವದೆಹಲಿ:ಮ್ಯಾಗಿ ನೂಡಲ್ಸ್ ನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳುವಂತೆ ಆಹಾರ ಸುರಕ್ಷತಾ ಪ್ರಾಧಿಕಾರ(ಎಫ್ಎಸ್ಎಸ್ಎ) ಆದೇಶ ನೀಡಿರುವ ಹಿನ್ನೆಲೆಯಲ್ಲಿ ನೂಡಲ್ಸ್ ಗಳ ಗುಣಮಟ್ಟ ಕುರಿತು ನ್ಯಾಯಾಂಗ ಪರಾಮರ್ಶೆ ನಡೆಸುವಂತೆ ನೆಸ್ಲೆ ಇಂಡಿಯಾ ಕಂಪೆನಿ ಮುಂಬೈ ಹೈಕೋರ್ಟ್ ಮೊರೆ ಹೋಗಿದೆ.
ಜೂನ್ 5ರಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಮತ್ತು ಜೂನ್ 6ರಂದು ಆಹಾರ ಮತ್ತು ಔಷಧ ಆಡಳಿತ ಮಂಡಳಿ ನೀಡಿರುವ ಆದೇಶಗಳನ್ನು ಉಲ್ಲೇಖಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2011ಕ್ಕೆ ವ್ಯಾಖ್ಯಾನ ನೀಡುವಂತೆ ಕಂಪೆನಿ ತನ್ನ ಅರ್ಜಿಯಲ್ಲಿ ಕೋರಿದೆ. ಇದೇ ಸಂದರ್ಭದಲ್ಲಿ ಕಂಪೆನಿ ಪ್ರಾಧಿಕಾರದ ಆದೇಶದಂತೆ ಮ್ಯಾಗಿ ನೂಡಲ್ಸ್ ನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳುವುದಾಗಿಯೂ ತಿಳಿಸಿದೆ.
ನೆಸ್ಲೆ ಇಂಡಿಯಾ ಕಂಪೆನಿಯ ಎಲ್ಲಾ ತರಹದ ಮ್ಸಾಗಿ ನೂಡಲ್ಸ್ ಗಳು ಮನುಷ್ಯನ ಸೇವನೆಗೆ ಅಸುರಕ್ಷಿತ ಮತ್ತು ಅಪಾಯಕಾರಿ ಎಂದು ಹೇಳಿ ಅವುಗಳ ಮಾರಾಟಕ್ಕೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕಳೆದ ವಾರ ನಿಷೇಧ ಹೇರಿತ್ತು. '2 ಮಿನಿಟ್ ಮ್ಯಾಗಿ'ಯಲ್ಲಿ ಅದರ ರುಚಿ ಹೆಚ್ಚಿಸುವ ಮೋನೊಸೋಡಿಯಂ ಗ್ಲುಟಮೇಟ್ ಮತ್ತು ಸತುವಿನ ಪ್ರಮಾಣ ಅನುಮತಿ ಮಟ್ಟಕ್ಕಿಂತ ಜಾಸ್ತಿಯಾಗಿದೆ ಎಂದು ಹೇಳಿ ಅವುಗಳ ಮಾರಾಟವನ್ನು ನಿಷೇಧಿಸಲಾಗಿತ್ತು.
ಮುಂಬೈ ಹೈಕೋರ್ಟ್ ನ ತೀರ್ಪು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ನೆಸ್ಲೆ ಕಂಪೆನಿ ತಿಳಿಸಿದೆ.