ಏರ್ ಪೋರ್ಟ್ ಸಿಬ್ಬಂದಿ ಘರ್ಷಣೆ ಪ್ರಕರಣ: 8 ಮಂದಿ ಬಂಧನ

ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಪ್ರವೇಶ ಕುರಿತಾದ ವಿವಾದಕ್ಕೆ ಸಂಬಂಧಿಸಿದಂತೆ ಭುಗಿಲೆದ್ದಿದ್ದ ಘರ್ಷಣೆ ಪ್ರಕರಣ ಸಂಬಂಧ ಶುಕ್ರವಾರ 8 ಮಂದಿ ಭದ್ರತಾ ಸಿಬ್ಬಂದಿಗಳನ್ನು ಕೇರಳ ಪೊಲೀಸರು..
ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
Updated on: 

ತಿರುವನಂತಪುರ: ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಪ್ರವೇಶ ಕುರಿತಾದ ವಿವಾದಕ್ಕೆ ಸಂಬಂಧಿಸಿದಂತೆ ಭುಗಿಲೆದ್ದಿದ್ದ ಘರ್ಷಣೆ ಪ್ರಕರಣ ಸಂಬಂಧ ಶುಕ್ರವಾರ 8 ಮಂದಿ ಭದ್ರತಾ ಸಿಬ್ಬಂದಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ವಿಮಾನ ನಿಲ್ದಾಣದ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಪೊಲೀಸರು ಇಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (Airport Authority of India-AAI) ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (Central Industrial Security Force-CISF)ಗೆ ಸೇರಿದ ಒಟ್ಟು 8 ಮಂದಿ ಸಿಬ್ಬಂದಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬುಧವಾರ ರಾತ್ರಿ ಸಂಭವಿಸಿದ್ದ ಈ ಘಟನೆಯಿಂದಾಗಿ ಸುಮಾರು 10 ಗಂಟೆಗೂ ಅಧಿಕ ಕಾಲ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿತ್ತು. ವಿಮಾನನಿಲ್ದಾಣ ಪ್ರವೇಶ ಕುರಿತಂತೆ  ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ನೋಡ ನೋಡುತ್ತಿದ್ದಂತೆಯೇ ಇದು ಪರಸ್ಪರ ಕೈ-ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ವಿವಾದ ಜಗಳಕ್ಕೆ ತಿರುಗಿ ಉಂಟಾದ ಘರ್ಷಣೆಯಲ್ಲಿ ಓರ್ವ ಭದ್ರತಾ ಸಿಬ್ಬಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದರು.

ಇನ್ನು ಕಲ್ಲಿಕೋಟೆ ಕರಿಪುರ್‌ ವಿಮಾನನಿಲ್ದಾಣಕ್ಕೆ ಪ್ರವೇಶ ಕುರಿತಂತೆ ಭದ್ರತಾ ಉಸ್ತುವಾರಿ ನೋಡಿಕೊಳ್ಳುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಹಾಗೂ ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ (ಎಎಐ) ನೌಕರರ ಮಧ್ಯೆ ಬಹಳ ದಿನದಿಂದಲೇ ವೈಮನಸ್ಸು ಇತ್ತು ಎಂದು ಹೇಳಲಾಗುತ್ತಿದೆ.

ಘಟನೆಯ ಹಿನ್ನಲೆ
ವಿಮಾನ ನಿಲ್ದಾಣ ಪ್ರವೇಶ ಕುರಿತಂತೆ ಎಎಐ ನೌಕರ ಸನ್ನಿ ಥಾಮಸ್‌ ಎಂಬಾತ ಮತ್ತು ಸಿಐಎಸ್‌ಎಫ್ ಯೋಧನೋರ್ವನ ನಡುವೆ ಜಗಳವೇರ್ಪಟ್ಟಿದ್ದು, ಇಬ್ಬರು ವ್ಯಕ್ತಿಗಳ ಪರಸ್ಪರ ಜಗಳ ನೋಡ ನೋಡುತ್ತಿದ್ದಂತೆಯೇ ಎರಡು ಗುಂಪುಗಳ ಜಗಳವಾಗಿ ಮಾರ್ಪಟ್ಟಿತ್ತು. ಉಭಯ ಗುಂಪಿನ ಯೋಧರು ಪರಸ್ಪರ ಘರ್ಷಣೆಗೆ ಇಳಿದಿದ್ದರು. ಈ ಸಂದರ್ಭ ಯೋಧನ ಬಳಿಯಿದ್ದ ಬಂದೂಕನ್ನು ಥಾಮಸ್‌ ಎಳೆದಿದ್ದು, ಈ ಜಗ್ಗಾಟದಲ್ಲಿ ಗುಂಡು ಸಿಡಿದು ಓರ್ವ ಸಿಐಎಸ್‌ಎಫ್ ಯೋಧನೊಬ್ಬ ಮೃತಪಟ್ಟಿದ್ದನು.

ಬಳಿಕ ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಮತ್ತು ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರಾದರೂ, ಘಟನೆ ಬೆನ್ನಲ್ಲೇ ಸುಮಾರು 100ಕ್ಕೂ ಹೆಚ್ಚು ಸಿಐಎಸ್‌ಎಫ್ ಸಿಬ್ಬಂದಿ ರನ್‌ವೇಗೆ ನುಗ್ಗಿ ಪ್ರತಿಭಟನೆ ನಡೆಸಿದ್ದರು. ಘರ್ಷಣೆಯಿಂದಾಗಿ  ಕಲ್ಲಿಕೋಟೆಯಿಂದ ತೆರಳುವ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದ್ದು, ಅಲ್ಲಿಗೆ ಆಗಮಿಸಿಬೇಕಿದ್ದ ಎರಡು ವಿಮಾನಗಳನ್ನು ಬೇರೆಡೆಗೆ ಕಳುಹಿಸಲಾಗಿತ್ತು. ಅಲ್ಲದೆ ಸುಮಾರು 10 ತಾಸಿಗೂ ಅಧಿಕ ಸಮಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com