

ಫ್ರಾನ್ಸ್: ಗ್ಯಾಸ್ ಫ್ಯಾಕ್ಟರಿ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ಓರ್ವ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಪೂರ್ವ ಫ್ರಾನ್ಸ್ ನ ಸೈಂಟ್ ಕ್ವಿಟಿನ್ ಫಲ್ಲವೀಯರ್ ಫ್ಯಾಕ್ಟರಿಯಲ್ಲಿ ಸಂಭವಿಸಿದೆ. ಕಾರಿನಲ್ಲಿ ಗೇಟ್ ಮುರಿದು ಕಾರ್ಖಾನೆ ಒಳಗೆ ನುಗ್ಗಿದ ಉಗ್ರರು ಕಡಿಮೆ ಪ್ರಮಾಣದ ಸ್ಪೋಟಕಗಳನ್ನು ಇಟ್ಟು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾರ್ಖಾನೆ ಪಕ್ಕದಲ್ಲಿ ದೇಹದಿಂದ ಬೇರೆಯಾಗಿರುವ ವ್ಯಕ್ತಿಯ ಶಿರವನ್ನು ಇಡಲಾಗಿದೆ. ಅದರ ಪಕ್ಕದಲ್ಲಿ ಅರೇಬಿಕ್ ಭಾಷೆಯಲ್ಲಿ ಬರೆದಿರುವ ಧ್ವಜ ಇಟ್ಟು ಭಯೋತ್ಪಾದಕರು ಕಾಲ್ಕಿತ್ತಿದ್ದಾರೆ ಎಂದು ಪ್ರಾಥಮಿಕ ಹಂತದ ತನಿಖೆ ವರದಿ ನೀಡಿದೆ. ಇನ್ನು ಈ ಸಂಬಂಧ ಓರ್ವ ಶಂಕಿತ ಉಗ್ರನ್ನು ಬಂಧಿಸಿರುವ ಭಯೋತ್ಪಾದಕ ನಿಗ್ರಹ ದಳ ಆತನನ್ನು ವಿಚಾರಣೆಗೆ ಒಳಪಡಿಸಿದೆ. ಪ್ಯಾರಿಸ್ ನಿಂದ 400 ಕಿಮೀ ದೂರದಲ್ಲಿರುವ ಅಮೆರಿಕಾ ಮೂಲಕ ಗ್ಯಾಸ್ ಫ್ಯಾಕ್ಟರಿ ಇದಾಗಿದೆ.
ಘಟನೆ ಖಂಡಿಸಿರುವ ಫ್ರಾನ್ಸ್ ಪ್ರಧಾನಿ ಸೂಕ್ಷ್ಮ ಸ್ಥಳಗಳಿಗೆ ಬಿಗಿ ಭದ್ರತೆ ಕಲ್ಪಿಸುವಂತೆ ಸೂಚಿಸಿದ್ದಾರೆ. ಆರು ತಿಂಗಳ ಹಿಂದೆ ಅಂದರೆ ಜನವರಿ ತಿಂಗಳಿನಲ್ಲಿ ಫ್ರಾನ್ಸ್ ನ ಚಾರ್ಲಿ ಹೆಬ್ಡೋ ಪತ್ರಿಕೆ ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು. ಈ ಘಟನೆಯಲ್ಲಿ 17 ಮಂದಿ ಸಾವನ್ನಪ್ಪಿ 12 ಮಂದಿ ಗಾಯಗೊಂಡಿದ್ದರು.