ಐಐಟಿಯಲ್ಲಿ 89ನೇ ರ್ಯಾಂಕ್ ಪಡೆದ ಖುರೇಷಿಗೆ ಸಚಿವೆ ಸ್ಮೃತಿ ಇರಾನಿ ಸಹಾಯ ಹಸ್ತ

ಐಐಟಿಯಲ್ಲಿ 89ನೇ ರ್ಯಾಂಕ್ ಪಡೆದ ಕಾಶ್ಮೀರದ ಜಹೀದ್ ಅಹ್ಮದ್ ಖುರೇಷಿಗೆ ಕೇಂದ್ರ ಮಾನವ ಸಂಪನ್ಮೂಲ...
ಜಹೀದ್ ಅಹ್ಮದ್ ಖುರೇಷಿ- ಸ್ಮೃತಿ ಇರಾನಿ
ಜಹೀದ್ ಅಹ್ಮದ್ ಖುರೇಷಿ- ಸ್ಮೃತಿ ಇರಾನಿ
Updated on: 

ಶ್ರೀನಗರ: ಐಐಟಿಯಲ್ಲಿ  89ನೇ ರ್ಯಾಂಕ್ ಪಡೆದ ಕಾಶ್ಮೀರದ ಜಹೀದ್ ಅಹ್ಮದ್ ಖುರೇಷಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಸಹಾಯ ಹಸ್ತ ನೀಡಿದ್ದಾರೆ. ಖುರೇಷಿಯ ವಿದ್ಯಾಭಾಸಕ್ಕೆ ಬೇಕಾದ ಎಲ್ಲ ರೀತಿಯ ಸಹಾಯಗಳನ್ನು ತಾನು ಮಾಡುತ್ತೇನೆ ಎಂದು ಸ್ಮೃತಿ ಇರಾನಿ ತಿಳಿಸಿದ್ದಾರೆ.

ಖುರೇಷಿಯ ಕಷ್ಟದ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಇದನ್ನು ಓದಿದ ಸ್ಮೃತಿ ಇರಾನಿ ಖುರೇಷಿಗೆ ಫೋನ್ ಮಾಡಿದ್ದಾರೆ. ವಿವರಗಳನ್ನು ಕಲೆ ಹಾಕಿದ ನಂತ ಖುರೇಷಿಯ ಶಿಕ್ಷಣ ಮತ್ತು ಸ್ಕಾಲರ್‌ಶಿಪ್‌ಗೆ ಬೇಕಾದ ಎಲ್ಲ ರೀತಿಯ ಸಹಾಯಗಳನ್ನು ಮಾಡುವುದಾಗಿ ಸಚಿವೆ ಭರವಸೆ ನೀಡಿದ್ದರು.

ಯಾರು ಈ ಜಹೀದ್ ಖುರೇಷಿ?: ಉಗ್ರರ ಗುಂಡು ತಾಗಿ ಅಪ್ಪ ಸಾಯುವಾಗ ಜಹೀದ್ ಅಹ್ಮದ್ ಖುರೇಷಿ ಎರಡು ತಿಂಗಳ ಕೂಸು. ಅಮ್ಮ ನ ಲಾಲನೆ ಪಾಲನೆಯಲ್ಲಿ ಬೆಳೆಯಬೇಕಿದ್ದ ಸಮಯದಲ್ಲಿ ಅಮ್ಮ ಎರಡನೇ ಮದುವೆಯಾದಳು. ಈ ಹೊತ್ತಲ್ಲಿ ಅಜ್ಜ ಮತ್ತು ಅಜ್ಜಿಯ ಆರೈಕೆಯಲ್ಲಿ ಖುರೇಷಿ ಬೆಳೆದದ್ದು. ಶಾಲೆಗೆ ಸೇರಿಸಲು ಅಜ್ಜ ಅಜ್ಜಿಯ ಕೈಯಲ್ಲಿ  ದುಡ್ಡು ಕೂಡಾ ಇರರಲಿಲ್ಲ. ಹಾಗಿದ್ದರೂ ಕಷ್ಟ ಪಟ್ಟು ಓದಿದ ಹುಡುಗ ಜಹೀದ್ ಅಹ್ಮದ್ ಖುರೇಷಿ ಈಗ 21 ವರ್ಷಗಳ ನಂತರ ಐಐಟಿ ಪ್ರವೇಶ ಪರೀಕ್ಷೆಯಲ್ಲಿ 89 ನೇ ರ್ಯಾಂಕ್ ಪಡೆದಿದ್ದಾನೆ. ಊರಿಗೂ, ಕುಟುಂಬಕ್ಕೂ ಹೆಮ್ಮೆ ತಂದ ಈ ಹುಡುಗನಿಗೆ ಈಗ ಮತ್ತೊಂದು ಕಷ್ಟ ಎದುರಾಗಿದೆ. ಅದೇನೆಂದರೆ ಇನ್ನು ಕಲಿಕೆಗೆ ಬೇಕಾದ ದುಡ್ಡು ಇವನಲ್ಲಿ ಇಲ್ಲ. ಅದನ್ನು ಹೊಂದಿಸುವುದು ಹೇಗೆ? ಎಂಬುದು ಇವರ ಪ್ರಶ್ನೆ.

ಕೌನ್ಸಿಲಿಂಗ್ ಗೆ ಬೇಕಾದ 10,000 ರುಪಾಯಿ ಕೂಡಾ ನನ್ನ ಕೈಯಲ್ಲಿ ಇಲ್ಲ. ಆ ದುಡ್ಡು ಪಾವತಿ ಮಾಡದಿದ್ದರೆ ಅಡ್ಮಿಷನ್ ರದ್ದಾಗುತ್ತದೆ. ನನ್ನ ಕೈಯಲ್ಲಿರುವ ಫೋನ್ ಮಾರಿದರೂ ರು. 5000 ಅಷ್ಟೇ ಸಿಗುತ್ತದೆ ಎಂದು ಖುರೇಷಿ ಸಂಕಟವನ್ನು ತೋಡಿಕೊಂಡಿದ್ದನು.

ಇಲ್ಲಿನ ಕುಪ್‌ವಾರಾ ಜಲ್ಲೆಯ ದೂಡ್‌ವಾನ್ ಎಂಬ ಗ್ರಾಮದಲ್ಲಿ ಖುರೇಷಿ ಜನಿಸಿದ್ದು. 1995ರಲ್ಲಿ ಈತನ ಅಪ್ಪ ಫಾರೂಖ್ ಖುರೇಷಿ ಉಗ್ರರ ಗುಂಡು ತಗಲಿ ಸಾವನ್ನಪ್ಪಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com