

ಪೋರ್ಟ್ ಲೂಯಿಸ್: ಕಪ್ಪುಹಣಕ್ಕೆ ಕಡಿವಾಣ ಹಾಕಲು ಪಣತೊಟ್ಟಿರುವ ಮೋದಿ ಸರ್ಕಾರ ಈಗ ಕಪ್ಪುಹಣ ತಡೆಗೆ ಮಾರಿಷಸ್‍ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ದ್ವಿತೆರಿಗೆ ತಡೆ ಒಪ್ಪಂದದ ಉಲ್ಲಂಘನೆಯನ್ನು ತಪ್ಪಿಸುವಲ್ಲಿ ಎರಡೂ ರಾಷ್ಟ್ರಗಳ ಕೈ ಜೋಡಿಸಬೇಕಿವೆ ಎಂದಿರುವ ಪ್ರಧಾನಿ ಮೋದಿ ಅವರು, ದೀರ್ಘಾವಧಿಯಿಂದ ಬಾಕಿ ಉಳಿದಿರುವ ಒಪ್ಪಂದದ ಪರಿಷ್ಕರಣೆಗೆ ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಪ್ರಮುಖ ಮೂಲ ಸೌಕರ್ಯ ಯೋಜನೆಗಳ ಅನುಷ್ಠಾನಕ್ಕಾಗಿ ಭಾರತವು ಮಾರೀಷಸ್ ಗೆ ರು. 3,127 ಕೋಟಿ ಸಾಲ ನೀಡುವುದಾಗಿ ಘೋಷಿಸಿದ್ದಾರೆ.
ಗುರುವಾರ ಮಾರಿಷಸ್ ನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ದ್ವಿತೆರಿಗೆ ಒಪ್ಪಂದದ ಉಲ್ಲಂಘನೆ ತಡೆಯುವುದೇ ಎರಡೂ ರಾಷ್ಟ್ರಗಳ ಮುಖ್ಯ ಉದ್ದೇಶವಾಗಿದೆ. ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗಾಗಿ ಕಾರ್ಪೋರೇಟ್ ಕಂಪನಿಗಳು ಕೂಡ ಮಾರಿಷಸ್ ಮಾರ್ಗ ಹಿಡಿದಿರುವ ಆರೋಪಗಳಿವೆ. ಕಪ್ಪುಹಣ ಸಾಗಣೆಗೆ ಹಾಗೂ ತೆರಿಗೆ ತಪ್ಪಿಸಿಕೊಳ್ಳಲು ಈ ಮಾರ್ಗವನ್ನು ದುರ್ಬಳಕೆ ಮಾಡಲಾಗುತ್ತಿದೆ. ಈ ಅಭ್ಯಾಸಕ್ಕೆ ಕಡಿವಾಣ ಹಾಕುವ ಸಲುವಾಗಿ ಭಾರತ ಮತ್ತು ಮಾರಿಷಸ್ ಒಪ್ಪಂದ ಮಾಡಿಕೊಂಡಿವೆ ಎಂದಿದ್ದಾರೆ.
ಭಾರತ ನಿರ್ಮಿತ ಗಸ್ತು ನೌಕೆಗೆ ಚಾಲನೆ
ಮಾರಿಷಸ್ ನ ವಿಸ್ತೃತ ಆರ್ಥಿಕ ವಲಯಕ್ಕೆ ಹೆಚ್ಚಿನ ಶಕ್ತಿ ನೀಡುವ ಭಾರತ ನಿರ್ಮಿತ ನೌಕಾ ಗಸ್ತು ಹಡಗಿಗೆ ಪ್ರಧಾನಿ ಮೋದಿ ಗುರುವಾರ ಚಾಲನೆ ನೀಡಿದರು. ಈ ನೌಕೆಯು ಹಿಂದೂ ಮಹಾಸಾಗರಕ್ಕೆ ಹೆಚ್ಚು ಸುರಕ್ಷೆ ಮತ್ತು ಭದ್ರತೆ ಒದಗಿಸಲಿದೆ ಎಂದು ಅವರು ಇದೇ ವೇಳೆ ನುಡಿದರು. ಹಿಂದೂ ಮಹಾಸಾಗರದಲ್ಲಿ ತನ್ನ ಅಸ್ತಿತ್ವ ಸಾಧಿಸಲು ಚೀನಾ ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ 1,300 ಟನ್ ನೌಕೆಯನ್ನು ಮಾರಿಷಸ್ ನೌಕಾಪಡೆಗೆ ಸೇರಿಸಲು ಭಾರತ ನೆರವು ನೀಡಿದ್ದು ವಿಶೇಷ, ಮಾರಿಷಸ್ 23 ಲಕ್ಷ ಚದರ ಕಿ.ಮೀ.ನ ಆರ್ಥಿಕ ವಲಯ ಹೊಂದಿದೆ.
ಅಪ್ರವಾಸಿ ಘಾಟ್‍ಗೆ ಭೇಟಿ: ವಲಸಿಗರಿಗೆ ನಮನ
ಪೋರ್ಟ್ ಲೂಯಿಸ್‍ನಲ್ಲಿರುವ `ಆಪ್ರವಾಸಿ ಘಾಟ್'ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, 2 ಶತಮಾನಗಳ ಹಿಂದೆ ಮಾರಿಷಸ್‍ಗೆ ಬಂದ ಭಾರತೀಯ ಕಾರ್ಮಿಕರಿಗೆ ನಮನ ಸಲ್ಲಿಸಿದರು. ಆಪ್ರವಾಸಿ ಘಾಟ್ ಎನ್ನುವುದು ಅದಮ್ಯ ಮಾನವ ಶಕ್ತಿ ಹಾಗೂ ನಮ್ಮ ಜನರ ನಡುವಿನ ಆತ್ಮೀಯ ಸಂಬಂಧಗಳ ಪ್ರತೀಕ ಎಂದ ಮೋದಿ, ಈ ಸ್ಥಳವನ್ನು ಸಂರಕ್ಷಿಸುವುದು ನಮ್ಮೆಲ್ಲರ ಪವಿತ್ರ ಕರ್ತವ್ಯ ಎಂದೂ ಹೇಳಿದರು.
ಇದೇ ವೇಳೆ, ಹಿಂದಿ ಭಾಷೆಯು ವಿಶ್ವದಲ್ಲೇ ವಿಶೇಷ ಸ್ಥಾನ ಪಡೆದಿದೆ. ಅದಕ್ಕೆ ಅಪೂರ್ವ ಕೊಡುಗೆ ನೀಡುವ ಮೂಲಕ ಹಿಂದಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಕ್ಕೆ ಮಾರಿಷಸ್ ಅನ್ನು ಶ್ವಾಘಿಸಲೇಬೇಕು ಎಂದು ಪ್ರಧಾನಿ ನುಡಿದರು. ಜತೆಗೆ, ರಾಷ್ಟ್ರೀಯ ದಿನವನ್ನು ಆಚರಿಸುತ್ತಿರುವ ಮಾರಿಷಸ್‍ಗೆ 125 ಕೋಟಿ ಭಾರತೀಯರ ಪರವಾಗಿ ಪ್ರಧಾನಿ ಶುಭ ಕೋರಿದರು.