

ನವದೆಹಲಿ: ಬೆಳ್ಳಂದೂರು ಮತ್ತು ಆಗರ ಕೆರೆಗಳ ನಡುವೆ ಅಕ್ರಮವಾಗಿ ಮತ್ತು ನಿಯಮ ಮೀರಿ ಕಟ್ಟಡ ನಿರ್ಮಿಸಿ, ರಾಜಕಾಲುವೆ ಸೇರಿದಂತೆ ಕೆರೆಗಳ ಜಲಮೂಲಗಳಿಗೆ ಹಾನಿ ಮಾಡಿರುವ ಮಂತ್ರಿ ಟೆಕ್ ಝೋನ್ ಪ್ರೈವೇಟ್ ಲಿಮಿಟೆಡ್ ಗೆ ರು.117.35 ಕೋಟಿ ಮತ್ತು ಕೋರ್ ಮೈಂಡ್ ಸಾಫ್ಟ್ ವೇರ್ ಅಂಡ್ ಸರ್ವೀಸ್ ಪ್ರೈವೇಟ್ ಲಿಮಿಡೆಟ್‍ಗೆ ರು. 22.5 ಕೋಟಿ ದಂಡ ವಿಧಿಸಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶ ನೀಡಿದೆ.
ದಂಡದ ಮೊತ್ತವನ್ನು ಈ ಸಂಸ್ಥೆಗಳು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪಾವತಿಸಬೇಕು. ಮಂಡಳಿಯು ಈ ಮೊತ್ತ ಬಳಸಿ ಎರಡೂ ಕಂಪನಿಗಳು ಉಂಟು ಮಾಡಿರುವ ಕೆರೆಗಳ ಜಲಮೂಲ ಮತ್ತಿತರ ಪರಿಸರ ಹಾನಿಯನ್ನು ನಿವಾರಿಸಿ, ಪರಿಸರ ಪುನಶ್ಚೇತನಗೊಳಿಸಬೇಕು ಎಂದು ಆದೇಶಿಸಿದೆ.
ಇದಷ್ಟೇ ಅಲ್ಲ, ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿ ಬೆಂಗಳೂರಿನ ಇತರ ಕೆರೆಗಳ ಒತ್ತುವರಿ ಬಗ್ಗೆಯೂ ಅಧ್ಯಯನ ಮಾಡಿ, ಅಲ್ಲಿನ ಜಲಮೂಲದ ಬಗ್ಗೆ ವರದಿ ನೀಡುವಂತೆಯೂ ಪೀಠ ಸೂಚನೆ ನೀಡಿದೆ.
ಉನ್ನತ ಮಟ್ಟದ ಸಮಿತಿ ರಚನೆ
ಎಂಟು ಸದಸ್ಯರನ್ನೊಳಗೊಂಡ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿರುವ ನ್ಯಾಯಾಧೀಕರಣವು, ಮೂರು ತಿಂಗಳೊಳಗೆ ಎರಡು ಕೆರೆಗಳ ಜಲಮೂಲಗಳಿಗೆ ಈ ಕಂಪನಿಗಳು ಮಾಡಿರುವ ಹಾನಿಯ ಅಧ್ಯಯನ ಮಾಡಬೇಕು ಮತ್ತು ಆಗಿರುವ ಹಾನಿ ನಿವಾರಿಸಿ ಮತ್ತೆ ಯಥಾಸ್ಥಿತಿ ಕಾಯ್ದುಕೊಳ್ಳುವ ಮಾರ್ಗೋಪಾಯಗಳನ್ನು
ಶಿಫಾರಸು ಮಾಡುವಂತೆ ಸೂಚಿಸಿದೆ.
ಎಲ್ಲಕ್ಕೂ ಮಿಗಿಲಾಗಿ ಉನ್ನತ ಮಟ್ಟದ ತಜ್ಞರ ಸಮಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸುವವರೆಗೆ ಬೆಂಗಳೂರಿನಲ್ಲಿ ಕೆರೆ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಹೊಸ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅನುಮೋದನೆ ನೀಡದಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಹಾಗೂ ವಿವಿಧ ಸಕ್ಷಮ ಪ್ರಾಧಿಕಾರಿಗಳಿಗೆ ನಿರ್ಬಂಧ ಹೇರಿದೆ.
ಸಮಿತಿ ಕಾರ್ಯವ್ಯಾಪ್ತಿ