

ಲಂಡನ್: ಯುನೈಟೆಡ್ ಕಿಂಗ್‍ಡಮ್ ಮಹಾಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ಮತ ಸಮೀಕ್ಷೆಗಳ ಪ್ರಕಾರ ಕನ್ಸರ್ವೇಟಿವ್ ಮತ್ತು ಲೇಬರ್ ಪಕ್ಷಗಳ ನಡುವೆ ನಿಕಟ ಸ್ಪರ್ಧೆ ಇದೆ. ಆದರೂ, ತ್ರಿಶಂಕು ಸಂಸತ್ ನಿರ್ಮಾಣವಾಗುವ ಸಾಧ್ಯತೆಗಳಿವೆ.
ಬುಧವಾರ ಡೇವಿಡ್ ಕೆಮರಾನ್ ಮತ್ತು ಎಡ್ವರ್ಡ್ ಕೂದಲೆಳೆಯ ಸ್ಪರ್ಧೆ ಎನ್ನುತ್ತಿದ್ದ ವರದಿಗಳು, ಈಗ ಕೆಮೆರಾನ್ ಜಯಗಳಿಸುವುದು ಖಚಿತ ಎನ್ನುತ್ತಿವೆ. ಆದರೆ ಗೂಗಲ್ ಸರ್ಚ್ ಪ್ರಕಾರ ಮಿಲಿ ಬ್ಯಾಂಡ್ ಮೂರನೇ ಸ್ಥಾನಕ್ಕೆ ಹೋಗಲಿದ್ದು, ನಿಗೆಲ್ ಫರಾಜ್ ದ್ವಿತೀಯ ಸ್ಥಾನಕ್ಕೇರುವರೆಂದು ಅಂದಾಜಿಸುತ್ತಿವೆ.
ಗೂಗಲ್ ಮ್ಯಾಪ್ ಸಮೀಕ್ಷೆ: ಇಂಟರ್‍ನೆಟ್ ಸರ್ಚ್‍ನಲ್ಲಿ ಯಾವ ಪಾರ್ಟಿ ಯಾವ ನಾಯಕರು ಹೆಚ್ಚು ಹುಡುಕಾಡಲ್ಪಟ್ಟಿದ್ದಾರೆ ಎಂಬುದನ್ನು ಸೂಚಿಸಲು ಗೂಗಲ್ ಒಂದು ಮ್ಯಾಪ್ ಕೂಡ ಪ್ರಕಟಿಸಿದೆ. ಕಳೆದ ಹನ್ನೆರಡು ತಿಂಗಳ ಸರ್ಚ್ ವಿವರಗಳನ್ನು ಆಧರಿಸಿ ಈ ಮ್ಯಾಪ್ ಸಿದ್ಧಪಡಿಸಿದ್ದು, ಆ ಪ್ರಕಾರವಾಗಿ, ಡೇವಿಡ್ ಕೆಮೆರಾನ್ ಜಯಗಳಿಸುವುದು ಶತಸಿದ್ಧಿ.
ಲೇಬರ್ ಪಾರ್ಟಿ 3ನೇ ಸ್ಥಾನಕ್ಕೆ ಕುಸಿತ?:
ಮಹಾಚುನಾವಣೆಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಮತದಾನವಾಗಿದ್ದು, ಬಿರುಬಿಸಿಲಿನ ನಡುವೆಯೂ ಉತ್ಸಾಹದ ಮತದಾನವಾಗಿದೆ. ವಲಸಿಗರ ಹಾಗೂ ಭಾರತೀಯ ಸಮುದಾಯದ ಮತಗಳೇ ನಿರ್ಣಾಯಕವಾಗುವುದು ಖಚಿತವಾಗಿದೆ. ಕೆಮೆರಾನ್ ನೇತೃತ್ವದ ಕನ್ಸರ್ವೇಟಿವ್ ಪಾರ್ಟಿ ಕಿರು ಅಂತರದ ಜಯಗಳಿಸುವ ಸಾಧ್ಯತೆ ಇದೆ.
ಅಂಚೆ ಮತದಾನ
ಒಂದು ದಿನ ಮುಂಚಿತವಾಗಿಯೇ ಪೊಸ್ಟ್ ಮೂಲಕ ಮತದಾನ ಮಾಡುವ ಅವಕಾಶ ಚುನಾವಣಾ ಆಯೋಗ ನೀಡಿತ್ತು. ಒಟ್ಟು ಮತದಾರರ ಶೇ15ರಷ್ಟು ಮಂದಿ ಅಂಚೆ ಮೂಲಕ ಮತದಾನ ಮಾಡಿದ್ದಾರೆ. ಮೊದಲ ಬಾರಿಗೆ ಆನ್‍ಲೈನ್ ಮತದಾನ ವ್ಯವಸ್ಥೆ ಮಾಡಿದ್ದು ಈ ಬಾರಿಯ ಚುನಾವಣಾ ವಿಶೇಷ.
ಸೆಲ್ಫಿ ನಿಷೇಧ:
ಇಂಗ್ಲೆಂಡ್‍ನಲ್ಲಿ ಚುನಾವಣಾ ನೀತಿಯನ್ನು ಈ ಬಾರಿ ಬಿಗಿಗೊಳಿ ಸಿದ್ದು, ಮತಗಟ್ಟೆಯ ಬಳಿ ಬಾವುಟ, ಸ್ಲೋಗನ್ ಇತ್ಯಾದಿಗಳ ಮೂಲಕ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿತ್ತು. ಮೊಬೈಲ್ ಬಳಕೆ, ಸಾಮಾಜಿಕ ತಾಣಗಳ ಜನಪ್ರಿಯತೆ ಹಿನ್ನೆಲೆಯಲ್ಲಿ, ಮತದಾರರು ಪ್ರಭಾವಕ್ಕೆ ಒಳಗಾಗಬಾರದೆಂಬ ಕಾರಣಕ್ಕೆ ಸೆಲ್ಫಿ ತೆಗೆಯುವುದು ಹಾಗೂ ಟ್ವಿಟರ್ ಫೇಸ್ ಬುಕ್ ಬಳಕೆಯನ್ನು ಮತಗಟ್ಟೆಯ ಸುತ್ತಮುತ್ತ ನಿಷೇಧಿಸಲಾಗಿತ್ತು.
ಭಾರತೀಯರೇ ನಿರ್ಣಾಯಕರು
ಅಂದ ಹಾಗೆ ಈ ಬಾರಿಯ ಚುನಾವಣೆಯಲ್ಲಿ 15 ಲಕ್ಷ ಮಂದಿ ಭಾರತೀಯ ಮೂಲದ ಮತದಾರರೇ ಪ್ರಾಮುಖ್ಯತೆ ವಹಿಸಿದ್ದಾರೆ. ಈ ಪೈಕಿ 6,15,000 ಮಂದಿ ವಿವಿಧ ವಿವಿಗಳಲ್ಲಿರುವ ಭಾರತೀಯ ವಿದ್ಯಾರ್ಥಿಗಳೂ ಸೇರಿದ್ದಾರೆ. ಕಣದಲ್ಲಿರುವ ಭಾರತೀಯರು: ಕೀತ್ ವಾಜ್, ವಲೆರಿ ವಾಜ್, ವಿರೇಂದರ್ ಶರ್ಮ, ಸೀಮಾ ಮಲ್ಹೋತ್ರ, ಅರುಣ್, ಸೂರಿಯ ಫೋಟೇ, ಪ್ರೀತಿ ಪಟೇಲ್, ರಿಷಿ ಸುನಕ್.