

ನವದೆಹಲಿ: ಕೆಳಹಂತದ ನ್ಯಾಯಾಲಯದ ಅಧಿಕಾರಿಗಳ ನೇಮಕಕ್ಕೆ ಸಂಬಂಧಿಸಿ ಮದ್ರಾಸ್ ಹೈಕೋರ್ಟ್‍ನ ವಿವಾದಾತ್ಮಕ ಜಡ್ಜ್ ಸಿ.ಎಸ್.ಕರ್ಣನ್ ಹೊರಡಿಸಿದ್ದ ಮಧ್ಯಂತರ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ವಿಧಿಸಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರ ಅಧಿಕಾರವನ್ನು ದುರ್ಬಲಗೊಳಿಸಿದ ಆರೋಪ ಜಡ್ಜ್ ಕರ್ಣನ್ ಅವರ ಮೇಲಿದೆ. ಈ ಬಗ್ಗೆ ಸೋಮವಾರ ಆದೇಶ ಹೊರಡಿಸಿದ ಸುಪ್ರೀಂ ಕೋರ್ಟ್, ಸ್ವಯಂಪ್ರೇರಿತ ರಿಟ್ ಅರ್ಜಿಗೆ ಸಂಬಂಧಿಸಿ ನ್ಯಾ. ಕರ್ಣನ್ ಅವರು ಏ.30ರಂದು ಮಧ್ಯಂತರ ಆದೇಶ ಹೊರಡಿಸಿದ್ದಾರೆ.
ಈ ಆದೇಶಕ್ಕೆ ನಾವು ತಡೆ ತರುತ್ತಿದ್ದೇವೆ. ವಿಶೇಷ ಅನುಮತಿ ಅರ್ಜಿ ಇತ್ಯರ್ಥಗೊಳ್ಳುವವರೆಗೆ ತಮಿಳುನಾಡಿನಲ್ಲಿ ಕಿರಿಯ ಅಧಿಕಾರಿಗಳ ಆಯ್ಕೆ ಮತ್ತು ನೇಮಕಕ್ಕಾಗಿ ಹೈಕೋರ್ಟ್ ಆರಂಭಿಸಿರುವ ಪ್ರಕ್ರಿಯೆಯಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸೂಚಿಸಿದೆ.