

ನವದೆಹಲಿ: ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇಮಕ ವಿಚಾರದಲ್ಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಹಸ್ತಕ್ಷೇಪ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರ ನಜೀಬ್ ಜಂಗ್ ರ ಮೂಲಕ ದೆಹಲಿ ಸರ್ಕಾರ ನಡೆಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಅರವಿಂದ್ ಕೇಜ್ರಿವಾಲ್, ದೆಹಲಿ ಸರ್ಕಾರದ ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ವಿನಾಃ ಕಾರಣ ಹಸ್ತಪಕ್ಷೇಪ ಮಾಡುತ್ತಿದ್ದಾರೆ. ನಜೀಬ್ ಜಂಗ್ ರ ಮೂಲಕ ದೆಹಲಿ ಸರ್ಕಾರದಲ್ಲಿ ಹಿಡಿತ ಸಾಧಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಪ್ರಜಾಪ್ರಭುತ್ವ ಸರ್ಕಾರ ಅಸ್ತಿತ್ವದಲ್ಲಿದೆ. ಆಪ್ ಪಕ್ಷ ಆಡಳಿತ ನಡೆಸಲು ಅನುವು ಮಾಡಿಕೊಡಬೇಕು. ಉಪರಾಜ್ಯಪಾಲರ ಮೂಲಕ ದೆಹಲಿ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಕೇಂದ್ರ ಸರ್ಕಾರದ ಈ ನಡೆ ಕಾನೂನು ಬಾಹಿರ ಎಂದಿರುವ ಕೇಜ್ರಿವಾಲ್, ಸರ್ಕಾರದ ಅಧಿಕಾರ ಮೊಟಕುಗೊಳಿಸಲು ಯತ್ನಿಸಬಾರದು ಎಂದು ತಿಳಿಸಿದ್ದಾರೆ.
ದೆಹಲಿ ಮುಖ್ಯ ಕಾರ್ಯದರ್ಶಿ ನೇಮಕ ಸಂಬಂಧ ಅರವಿಂದ್ ಕೇಜ್ರಿವಾಲ್ ಹಾಗೂ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ನಡುವೆ ಜಂಗೀಕುಸ್ತಿ ಏರ್ಪಟ್ಟಿತ್ತು.