

ನವದೆಹಲಿ: ದೆಹಲಿಯಲ್ಲಿ ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳ ನಡುವಿನ ಸಂಬಂಧ ಉತ್ತಮವಾಗಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗುರುವಾರ ತಿಳಿಸಿದ್ದಾರೆ.
ಸರ್ಕಾರ ಸಂವಿಧಾನಬದ್ಧವಾಗಿ ಕೆಲಸ ಮಾಡುತ್ತಿದೆ. ಇದುವರೆಗೆ ದೆಹಲಿಯಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಉದ್ಯಮದಂತೆ ಬೆಳೆದುಹೋಗಿತ್ತು. ನಾವು ಅದನ್ನು ನಿಲ್ಲಿಸಿದೆವು. ಅದಕ್ಕೆ ಜನರು ನಮ್ಮನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.
ಮುಕ್ತ ಮತ್ತು ನಿಸ್ಪಕ್ಷಪಾತ ರೀತಿಯಲ್ಲಿ ಕೆಲಸ ಮಾಡಲು ಬಿಡಬೇಕೆಂದು ಗೃಹ ಸಚಿವ ರಾಜನಾಥ್ ಸಿಂಗ್, ದೆಹಲಿ ಲೆಫ್ಟಿನೆಂಟ್ ಗವರ್ನರ್ ಹಾಗೂ ಮುಖ್ಯಮಂತ್ರಿಗಳನ್ನು ಒತ್ತಾಯಿಸಲು ದೆಹಲಿ ಐಎಎಸ್ ಅಧಿಕಾರಿಗಳ ಸಂಘ ನಿನ್ನೆ ನಿರ್ಣಯ ತೆಗೆದುಕೊಂಡ ಬೆನ್ನಲ್ಲೇ ಸಿಸೋಡಿಯಾ ಈ ಹೇಳಿಕೆ ನೀಡಿದ್ದಾರೆ.
ಸಂವಿಧಾನದ ಯಾವ ಸಾಧ್ಯತೆ ಮೇಲೆ ದೆಹಲಿ ಸರ್ಕಾರಕ್ಕೆ ನಿರ್ದೇಶನ ಮತ್ತು ಆದೇಶಗಳನ್ನು ನೀಡುತ್ತಿರುವುದಾಗಿ ತಿಳಿಸುವಂತೆ ಕೋರಿ ಸಿಸೋಡಿಯಾ ಬುಧವಾರ ರಾಜ್ಯಪಾಲರಿಗೆ ಪತ್ರ ಬರೆದಿದ್ದರು.ಸಂವಿಧಾನದ Government of National Capital Territory of Delhi Actನಡಿ ಉತ್ತರಿಸುವಂತೆ ಅವರು ಕೇಳಿದ್ದರು. ಅದಕ್ಕೆ ಉತ್ತರಿಸಿರುವ ಲೆಫ್ಟಿನೆಂಟ್ ಗವರ್ನರ್ ಜಂಗ್, ತಮಗೆ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಗೆ ಸಂವಿಧಾನಿಕ ಅಧಿಕಾರವಿದೆ ಎಂದು ಹೇಳಿದ್ದಾರೆ.