

ನವದೆಹಲಿ: ಆಪ್ ನ ಮಾಜಿ ಅಭಿಮಾನಿಯೊಬ್ಬ ತಾನು ಮಾಡಿಕೊಟ್ಟ ಲೋಗೊ ನ್ನು ವಾಪಸ್ ಕೇಳಿದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಚಿಹ್ನೆಯನ್ನು ಬದಲಾವಣೆ ಮಾಡಲಾಗಿದೆ.
ಈ ಹಿಂದಿದ್ದ ಕೇಸರಿ ಹಾಗೂ ಹಸಿರು ಬಣ್ಣದ ಬದಲು ಪಕ್ಷದ ನೂತನ ಚಿಹ್ನೆಯನ್ನು ಸಂಪೂರ್ಣವಾಗಿ ನೀಲಿ ಬಣ್ಣದಲ್ಲಿ ರೂಪಿಸಲಾಗಿದೆ. ಪಕ್ಷದ ಟ್ವಿಟರ್ ಹಾಗೂ ಫೇಸ್ ಬುಕ್ ಪೇಜ್ ನಲ್ಲಿ ನೂತನ ಲೋಗೊ ಕಾಣುತ್ತಿದೆ. ಆದರೆ ಆಮ್ ಆದ್ಮಿಯ ಅಧಿಕೃತ ವೆಬ್ ಸೈಟ್ ನಲ್ಲಿನ್ನೂ ಹಳೆಯ ಚಿಹ್ನೆಯೇ ರಾರಾಜಿಸುತ್ತಿದೆ.
ಆಮ್ ಆದ್ಮಿ ಪಕ್ಷ ಪ್ರಾರಂಭವಾದಾಗ ಕಾರ್ಯಕರ್ತನಾಗಿದ್ದ ಸುನಿಲ್ ಲಾಲ್, ತಾನು ವಿನ್ಯಾಸಗೊಳಿಸಿದ್ದ ಚಿಹ್ನೆಯನ್ನು ವಾಪಸ್ ನೀಡಬೇಕೆಂದು ಕಳೆದ ತಿಂಗಳು ಆಪ್ ನಾಯಕ ಹಾಗೂ ದೆಹಲಿ ಸಿ.ಎಂ ಅರವಿಂದ್ ಕೇಜ್ರಿವಾಲ್ ಗೆ ಪತ್ರ ಬರೆದಿದ್ದರು. ಆಪ್ ನ ಆಂತರಿಕ ಭಿನ್ನಮತದಿಂದ ಬೇಸತ್ತಿದ್ದ ಪರಿಣಾಮ ಸುನಿಲ್ ಲಾಲ್ ಬೇಡಿಕೆ ಮುಂದಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಚಿಹ್ನೆ ಬದಲಾಗಿದೆ.
ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ಆಮ್ ಆದ್ಮಿ ಪಕ್ಷದಿಂದ ಉಚ್ಚಾಟನೆ ಮಾಡಿದ್ದರ ಪರಿಣಾಮ ಕೇಜ್ರಿವಾಲ್ ವಿರುದ್ಧ ಅಸಮಾಧಾನ ಹೊರಹಾಕಿದ್ದ ಅನೇಕ ಕಾರ್ಯಕರ್ತರು ವ್ಯಾಗನ್ ಆರ್ ಕಾರು ಸೇರಿದಂತೆ ತಾವು ನೀಡಿದ್ದ ದೇಣಿಗೆಗಳನ್ನು ವಾಪಸ್ ನೀಡುವಂತೆ ಆಗ್ರಹಿಸಿದ್ದರು.