

ಮುಂಬೈ: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದ್ದು, ತಮಗೂ ಅಭದ್ರತೆ ಭಾವನೆ ಕಾಡುತ್ತಿದೆ ಎಂದಿದ್ದ ಬಾಲಿವುಡ್ ನಟ ಆಮಿರ್ ಖಾನ್ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
'ಬಾಲಿವುಡ್ ನಟನಿಗೆ ನಾವು ಸಾಕಷ್ಟು ಭದ್ರತೆ ಒದಗಿಸಿದ್ದೇವೆ. ಇದುವರೆಗೂ ಖಾನ್ ವಿರುದ್ಧ ನಗರದಲ್ಲಿಯಾಗಲಿ ಅಥವಾ ಅವರ ನಿವಾಸದ ಬಳಿಯಾಗಲಿ ಯಾವುದೇ ಪ್ರತಿಭಟನೆ ನಡೆದಿಲ್ಲ. ಆದರೆ ಕೆಲವು ಸಂಘಟನೆಗಳು ಆಮಿರ್ ಖಾನ್ ವಿರುದ್ಧ ಪ್ರತಿಭಟನೆ ನಡೆಸಬಹುದು ಎಂಬ ಮಾಹಿತಿ ಇದೆ. ಹೀಗಾಗಿ ಮುನ್ನಚ್ಚರಿಕೆ ಕ್ರಮವಾಗಿ ಭದ್ರತೆ ಹೆಚ್ಚಿಸಲಾಗಿದೆ' ಎಂದು ಡಿಸಿಪಿ ಧನಂಜಯ್ ಕುಲಕರ್ಣಿ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ದೇಶದಲ್ಲಿ ಅಸಹಿಷ್ಣುತೆ ವಿರುದ್ಧದ ಸಾಂಸ್ಕೃತಿಕ ವಲಯದ ಜನಾಗ್ರಹಕ್ಕೆ ದನಿಗೂಡಿಸಿದ್ದ ಆಮೀರ್ ಖಾನ್, ಈ ವಾತಾವರಣದಿಂದ ಭೀತಗೊಂಡು ದೇಶ ತೊರೆದು ಹೋಗೋಣ ಎಂದು ಪತ್ನಿ ಸಲಹೆ ನೀಡಿರುವುದಾಗಿ ನಿನ್ನೆ ಹೇಳಿದ್ದರು.
ರಾಮನಾಥ ಗೋಯೆಂಕಾ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ್ದ ಆಮಿರ್, ಅಸಹಿಷ್ಣುತೆಯನ್ನು ವಿರೋಧಿಸಿ ಪ್ರಶಸ್ತಿಗಳನ್ನು ವಾಪಸು ನೀಡುತ್ತಿರುವ ಸಾಹಿತಿಗಳ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೆ ಕಳೆದ ಆರೆಂಟು ತಿಂಗಳುಗಳಿಂದ ತಾನೂ ಕೂಡ ಅಭದ್ರತಾ ಭಾವನೆ ಅನುಭವಿಸುತ್ತಿದ್ದೇನೆ. ದಿನನಿತ್ಯ ಪತ್ರಿಕೆಗಳಲ್ಲಿ ನೋಡುತ್ತಿರುವ ಸಂಗತಿಗಳು ನನ್ನನ್ನು ಆತಂಕ್ಕೀಡುಮಾಡುತ್ತಿವೆ. ನಾನದನ್ನು ನಿರಾಕರಿಸಲಾರೆ ಎಂದಿದ್ದರು.