ಇಂಡೋರ್: ಮಧ್ಯಪ್ರದೇಶದಲ್ಲಿ ನಡೆದಿರುವ ವ್ಯಾಪಂ ಹಗರಣದ ಪ್ರಮುಖ ಆರೋಪಿ ವ್ಯಾಪಂನ ಮಾಜಿ ಪರೀಕ್ಷಾ ನಿಯಂತ್ರಕ ಪಂಕಜ್ ತ್ರಿವೇದಿ ವಿರುದ್ಧ ಲೋಕಾಯುಕ್ತ ಪೊಲೀಸರು ಗುರುವಾರ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಲೋಕಾಯುಕ್ತ ಪೊಲೀಸರು ವಿಶೇಷ ನ್ಯಾಯಾಲದಲ್ಲಿ ಪಂಕಜ್ ತ್ರಿವೇದಿ ವಿರುದ್ಧ ಜಾರ್ಜ್ ಶೀಟ್ ಸಲ್ಲಿಸಿದ್ದು, ಈ ವೇಳೆ ಪಂಕಜ್ ತ್ರಿವೇದಿಯವರನ್ನು ಖುದ್ದು ಹಾಜರುಪಡಿಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು.
ಮನವಿಯನ್ನು ಸ್ವೀಕರಿಸಿದ ನ್ಯಾಯಾಲಯವು ಪಂಕಜ್ ತ್ರಿವೇದಿ ಅವರನ್ನು ವೈಯಕ್ತಿಕವಾಗಿ ಅಕ್ಟೋಬರ್ 19ರೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಪ್ರೊಡೆಕ್ಷನ್ ವಾರೆಂಟ್ ಜಾರಿ ಮಾಡಿದೆ.
ವ್ಯಾಪಂ ಹಗರಣದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ಪ್ರಸ್ತುತ ಪಂಕಜ್ ತ್ರಿವೇದಿ ಭೋಪಾಲ್ ಜೈಲಿನಲ್ಲಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಸಂಬಂಧಿಸಿದಂತೆ ಅವರನ್ನು ಹೆಚ್ಚಿನ ವಿಚಾರಣೆ ಒಳಪಡಿಸಲು ಅವರ ಖುದ್ದು ಹಾಜರಾತಿಗೆ ಅನುಮತಿ ನೀಡುವಂತೆ ಲೋಕಾಯುಕ್ತ ಪೊಲೀಸರು ಮನವಿ ಮಾಡಿದ್ದರು.
ಅಕ್ರಮ ಆಸ್ತಿ ಗಳಿಕೆ ಸಂಬಂಧಿಸಿದಂತೆ 2014 ಜನವರಿ 29ರಂದು ಲೋಕಾಯುಕ್ತ ಪೊಲೀಸರು ಇಂಡೋರ್ ಮತ್ತು ಭೋಪಾಲ್ ನಲ್ಲಿರುವ ಪಂಕಜ್ ತ್ರಿವೇದಿ ಮನೆ ಮೇಲೆ ದಾಳಿ ಮಾಡಿದ್ದರು. ಅಲ್ಲಿ ದೊರೆತ ದಾಖಲೆಗಳ ಆಧಾರದ ಮೇಲೆ ಪಂಕಜ್ ತ್ರಿವೇದಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಯಿತು.