ದೇಶ

ಆತ್ಮಚರಿತ್ರೆಯಲ್ಲಿ ಸಾವರ್ಕರ್ ಉಲ್ಲೇಖ: ಸೋನಿಯಾ ಗಾಂಧಿಗೆ ಕಾನೂನು ನೋಟಿಸ್; ಕ್ಷಮೆಯಾಚನೆಗೆ ಸತ್ಯಕಿ ಸಾವರ್ಕರ್ ಆಗ್ರಹ

ಪುಸ್ತಕದ 443ನೇ ಪುಟದಲ್ಲಿರುವ ಮತ್ತೊಂದು ಹೇಳಿಕೆಯ ಬಗ್ಗೆಯೂ ನೋಟಿಸ್‌ನಲ್ಲಿ ಆಕ್ಷೇಪಿಸಲಾಗಿದೆ. ಸಾವರ್ಕರ್ ಅವರ ಹಿಂದೂತ್ವ ಸಿದ್ಧಾಂತವನ್ನು ಭಾರತದಲ್ಲಿ ಹಿಂದೂಗಳೇ ಸರ್ವೋಚ್ಚರು ಎಂಬ ದೃಷ್ಟಿಕೋನವಾಗಿ ಪುಸ್ತಕದಲ್ಲಿ ವಿವರಿಸಲಾಗಿದೆ.

ಆತ್ಮಚರಿತ್ರೆಯಲ್ಲಿ ಸಾವರ್ಕರ್ ಉಲ್ಲೇಖ: ಸೋನಿಯಾ ಗಾಂಧಿಗೆ ಕಾನೂನು ನೋಟಿಸ್; ಕ್ಷಮೆಯಾಚನೆಗೆ ಸತ್ಯಕಿ ಸಾವರ್ಕರ್ ಆಗ್ರಹ
ಸತ್ಯಕಿ ಸಾವರ್ಕರ್ ಮತ್ತು ಸೋನಿಯಾ ಗಾಂಧಿ
Published On :

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ನೆನಪಿನ ಚರಿತ್ರೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಕುರಿತು ಮಾಡಿರುವ ಉಲ್ಲೇಖಗಳು ಇದೀಗ ವಿವಾದಕ್ಕೆ ಕಾರಣವಾಗಿವೆ.

ಪುಸ್ತಕದಲ್ಲಿರುವ ಕೆಲವು ಹೇಳಿಕೆಗಳು ಸಾವರ್ಕರ್ ಅವರ ಜೀವನ, ಸ್ವಾತಂತ್ರ್ಯ ಹೋರಾಟ ಮತ್ತು ರಾಜಕೀಯ ಸಿದ್ಧಾಂತಗಳನ್ನು ತಪ್ಪಾಗಿ ಬಿಂಬಿಸುತ್ತವೆ ಎಂದು ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪುಸ್ತಕದ ಕೆಲವು ಭಾಗಗಳನ್ನು ತೆಗೆದುಹಾಕುವಂತೆ ನೋಟಿಸ್ ನೀಡಲಾಗಿದೆ.

ನೋಟಿಸ್‌ನಲ್ಲಿ ಪುಸ್ತಕದ 201ನೇ ಪುಟದಲ್ಲಿರುವ ಹೇಳಿಕೆಗೆ ಮುಖ್ಯವಾಗಿ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಈ ಹೇಳಿಕೆಯು ಸಾವರ್ಕರ್ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬ್ರಿಟಿಷ್ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದರು ಅಥವಾ ಅವರ ವಿರುದ್ಧ ಬ್ರಿಟಿಷರಿಗೆ ಸಹಕರಿಸುತ್ತಿದ್ದರು ಎಂಬ ಅರ್ಥವನ್ನು ನೀಡುತ್ತದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಸಾವರ್ಕರ್ ಅವರ ಜೀವನ ಮತ್ತು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯನ್ನು ಸಂಪೂರ್ಣವಾಗಿ ಪರಿಶೀಲಿಸದೆ ಇಂತಹ ಹೇಳಿಕೆ ನೀಡಲಾಗಿದೆ ಎಂಬುದು ಆಕ್ಷೇಪ ವ್ಯಕ್ತಪಡಿಸಿರುವವರ ವಾದವಾಗಿದೆ.

ಪುಸ್ತಕದ 443ನೇ ಪುಟದಲ್ಲಿರುವ ಮತ್ತೊಂದು ಹೇಳಿಕೆಯ ಬಗ್ಗೆಯೂ ನೋಟಿಸ್‌ನಲ್ಲಿ ಆಕ್ಷೇಪಿಸಲಾಗಿದೆ. ಸಾವರ್ಕರ್ ಅವರ ಹಿಂದೂತ್ವ ಸಿದ್ಧಾಂತವನ್ನು ಭಾರತದಲ್ಲಿ ಹಿಂದೂಗಳೇ ಸರ್ವೋಚ್ಚರು ಎಂಬ ದೃಷ್ಟಿಕೋನವಾಗಿ ಪುಸ್ತಕದಲ್ಲಿ ವಿವರಿಸಲಾಗಿದೆ. ಇದು ಅವರ ರಾಜಕೀಯ ಮತ್ತು ಸೈದ್ಧಾಂತಿಕ ಚಿಂತನೆಗಳನ್ನು ಸರಿಯಾಗಿ ಪ್ರತಿನಿಧಿಸುವುದಿಲ್ಲ ಎಂದು ಸತ್ಯಕಿ ಸಾವರ್ಕರ್ ಪ್ರತಿಪಾದಿಸಿದ್ದಾರೆ.

ಸಾವರ್ಕರ್ ಅವರ ಬರಹಗಳು, ಭಾಷಣಗಳು ಮತ್ತು ರಾಜಕೀಯ ನಿಲುವುಗಳನ್ನು ಅವುಗಳ ಐತಿಹಾಸಿಕ ಹಿನ್ನೆಲೆಯೊಂದಿಗೆ ಅರ್ಥಮಾಡಿಕೊಳ್ಳಬೇಕು. ಒಂದು ವಾಕ್ಯದ ಮೂಲಕ ಅವರ ಸಂಪೂರ್ಣ ಸಿದ್ಧಾಂತವನ್ನು ವಿವರಿಸುವುದು ತಪ್ಪು ಎಂಬುದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ವೀರ ಸಾವರ್ಕರ್ ಅವರ ಸಹೋದರನ ಮೊಮ್ಮಗ ಸತ್ಯಕಿ ಸಾವರ್ಕರ್ ಅವರು ತಮ್ಮ ವಕೀಲರ ಮೂಲಕ ಸೋನಿಯಾ ಗಾಂಧಿ ಅವರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಪುಸ್ತಕದ 201 ಮತ್ತು 443ನೇ ಪುಟಗಳಲ್ಲಿರುವ ಹೇಳಿಕೆಗಳು ಸಾವರ್ಕರ್ ಅವರ ಗೌರವ ಮತ್ತು ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತವೆ ಎಂದು ಅವರು ಆರೋಪಿಸಿದ್ದಾರೆ.

ಸಾವರ್ಕರ್ ಕುರಿತು ಮಾಡಿರುವ ಹೇಳಿಕೆಗಳಿಗೆ ಬೇಷರತ್ ಕ್ಷಮೆಯಾಚಿಸಬೇಕು. – ಹೇಳಿಕೆಗಳ ಹಿನ್ನೆಲೆ ಮತ್ತು ಐತಿಹಾಸಿಕ ಆಧಾರವನ್ನು ಸ್ಪಷ್ಟಪಡಿಸಬೇಕು. ಪ್ರಕಾಶಕರೊಂದಿಗೆ ಚರ್ಚಿಸಿ ಮುಂದಿನ ಆವೃತ್ತಿಗಳಲ್ಲಿ ವಿವಾದಿತ ಅಂಶಗಳನ್ನು ತಿದ್ದುಪಡಿ ಮಾಡಬೇಕು ಅಥವಾ ತೆಗೆದುಹಾಕಬೇಕು. ನೋಟಿಸ್ ಸ್ವೀಕರಿಸಿದ 15 ದಿನಗಳೊಳಗೆ ಈ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಸತ್ಯಕಿ ಸಾವರ್ಕರ್ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.