ನವದೆಹಲಿ: ಸಂಶೋಧಕ ಎಂ ಎಂ ಕಲಬುರ್ಗಿ ಹತ್ಯೆ, ದಾದ್ರಿ ಘಟನೆ ಹಿನ್ನೆಲೆಯಲ್ಲಿ ಲೇಖಕರು, ಸಾಹಿತಿಗಳ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಬಾಯಿಬಿಟ್ಟಿರುವ ಸಾಹಿತ್ಯ ಅಕಾಡೆಮಿ, ಸಂವಿಧಾನದಲ್ಲಿರುವ ಮೂಲ ಜಾತ್ಯತೀತ ಮೌಲ್ಯಗಳು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಬದ್ಧ ಎಂದಿದೆ. ಅಕಾಡೆಮಿಯು ಎಲ್ಲ ಲೇಖಕರ, ಅವರ ಜಾತಿ, ಬಣ್ಣ, ವರ್ಗ ಅಥವಾ ರಾಷ್ಟ್ರೀಯತೆಯನ್ನು ನೋಡದೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ವ ಕೊಡುತ್ತದೆ. ಎಲ್ಲೇ ಲೇಖಕನ, ಕಲಾವಿದನ ಹತ್ಯೆಯಾದರೂ ಅದನ್ನು ಅಕಾಡೆಮಿ ಖಂಡಿಸುತ್ತದೆ ಎಂದು ಸಾಹಿತ್ಯ ಅಕಾಡೆಮಿಯ ಮುಖ್ಯಸ್ಥ ವಿಶ್ವನಾಥ್ ಪ್ರಸಾದ್ ತಿವಾರಿ ಭಾನುವಾರ ತಿಳಿಸಿದ್ದಾರೆ. ಇತ್ತೀಚಿನ ಘಟನೆಗಳ ಬಗ್ಗೆ ಅಕಾಡೆಮಿ ಮೌನ ವಹಿಸಿದೆ ಎಂಬ ವರದಿಗಳನ್ನು ನೋಡಿ ಬೇಸರವಾಗಿದೆ. ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಮಂಡಳಿ ಸಭೆಯ ಅನುಮತಿ ಪಡೆದ ಬಳಿಕವಷ್ಟೇ ನಾನು ನನ್ನ ಅಭಿಪ್ರಾಯಗಳನ್ನು ಅ„ಕೃತವಾಗಿ ಬಹಿರಂಗಪಡಿಸುತ್ತೇನೆ. ಇದು ಲೇಖಕರಿಂ ದಲೇ ನಡೆಸಲ್ಪಡುವ ಸಂಸ್ಥೆಯಾಗಿದ್ದು, ಅವರೇ ಮುಂದೆ ಬಂದು ಈ ಸ್ವಾಯತ್ತ ಸಂಸ್ಥೆಯ ಘನತೆಯನ್ನು ಕಾಪಾಡಬೇಕು ಎಂದೂ ಹೇಳಿದ್ದಾರೆ ತಿವಾರಿ. ಇದಕ್ಕೂ ಮೊದಲು ಮಾತನಾಡಿದ್ದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿ, ವಿಶ್ಲೇಷಕ ಆದಿಲ್ ಜಸ್ಸಾವಲ್ಲಾ, ಅಕಾಡೆಮಿಯು ಡಿಸೆಂಬರ್‍ನ ಸಭೆಯವರೆಗೆ ಕಾಯುವ ಬದಲು ಲೇಖಕರ ಹತ್ಯೆಯನ್ನು ಖಂಡಿಸಬೇಕು ಎಂದು ಆಗ್ರಹಿಸಿದ್ದರು. ಜತೆಗೆ, ಕಾಶ್ಮೀರಿ ಲೇಖಕರ ಒಕ್ಕೂಟ ಕೂಡ ಸಾಹಿತ್ಯ ಅಕಾಡೆಮಿಯು ಮೌನ ಮುರಿಯಲಿ ಎಂದು ಒತ್ತಾಯಿಸಿತ್ತು.ಕಲಬುರ್ಗಿ ಹತ್ಯೆ, ಹೆಚ್ಚುತ್ತಿರುವ ಅಸಹಿಷ್ಣುತೆ ವಿರುದ್ಧ ಅಕಾಡೆಮಿ ತಾಳಿರುವ ಮೌನವನ್ನು ಖಂಡಿಸಿ ಲೇಖಕರಾದ ನಯನತಾರಾ ಸೆಹೆಗಲ್, ಸಾರಾ ಜೋಸೆಫ್ , ಉದಯ್ ಪ್ರಕಾಶ್, ಅಶೋಕ್ ವಾಜಪೇಯಿ ಮತ್ತಿತರರು ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದರು. ಕವಿ ಸಚ್ಚಿದಾನಂದನ್ ಮತ್ತು ಕೇಕಿ ದಾರುವಲ್ಲಾ ಅವರು ಅಕಾಡೆಮಿ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದರು.