

ಶ್ರೀನಗರ: ಕಳೆದ 10 ದಿನಗಳ ಹಿಂದೆ ಗೋ ಕಳ್ಳಸಾಗಣೆ ಆರೋಪದ ಮೇಲೆ ಉದ್ರಿಕ್ತರ ಗುಂಪೊಂದು ನಡೆಸಿದ್ದ ಪೆಟ್ರೋಲ್ ಬಾಂಬ್ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಟ್ರಕ್ ಚಾಲಕ ಜಾಹೀದ್ ಅಹಮದ್ ನಿನ್ನೆ ಮೃತಪಟ್ಟಿದ್ದು, ಜಾಹೀದ್ ಅಂತ್ಯಕ್ರಿಯೆ ವೇಳೆ ಉದ್ರಿಕ್ತರ ಗುಂಪು ಹಾಗೂ ಭದ್ರತಾಪಡೆಗಳ ನಡುವೆ ಘರ್ಷಣೆ ನಡೆದಿದೆ.
ಇದೇ ವೇಳೆ ಪ್ರತ್ಯೇಕತವಾದಿಗಳು ಬಂದ್ ಗೆ ಕರೆ ನೀಡಿದ್ದಾರೆ. ಕಾಶ್ಮೀರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಎಂಟು ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಕರ್ಫ್ಯೂ ಜಾರಿ ಮಾಡಿದ್ದು, ಪ್ರತ್ಯೇಕತವಾದಿಗಳನ್ನು ಗೃಹ ಬಂಧನದಲ್ಲಿಡಲಾಗಿದೆ.
ಶ್ರೀನಗರದಿಂದ 56 ಕಿ.ಮೀ ದೂರದಲ್ಲಿರುವ ಅನಂತ್ ನಾಗ್ ನ ಹಳ್ಳಿಯೊಂದರಲ್ಲಿ ಜಾಹೀದ್ ವಾಸವಾಗಿದ್ದು, ಇಂದು ಆತನ ಅಂತ್ಯಕ್ರಿಯೆ ನಡೆಸಲಾಗಿದ್ದು, ಇದರಿಂದ ಉದ್ರಿಕ್ತಗೊಂಡ ಗ್ರಾಮದವರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಭದ್ರತಾ ಪಡೆಗಳ ಮೇಲೆ ಕಲ್ಲುಗಳನ್ನು ತೂರಿದರು. ಇದರಿಂದ ಭದ್ರತಾಪಡೆ ಯೋಧರು ಪ್ರತಿಭಟನಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದರು.
ಅಕ್ಟೋಬರ್ 9 ರಂದು ಜಮ್ಮು ಮತ್ತು ಕಾಶ್ಮೀರದ ಉದಮ್ ಪುರ್ ನಲ್ಲಿ ಗೋ ಕಳ್ಳ ಸಾಗಾಣೆ ಮಾಡುತ್ತಿದ್ದಾರೆ ಎಂದು ಉದ್ರಿಕ್ತರ ಗುಂಪೊಂದು ಪೆಟ್ರೋಲ್ ಬಾಂಬ್ ದಾಳಿ ಮಾಡಿತ್ತು. ಈ ಘಟನೆಯಲ್ಲಿ ಚಾಲಕ ಜಾಹೀದ್ ಅಹಮದ್ ನಿನ್ನೆ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ.