

ಮಿರ್ಜಾಪುರ: ಶೌಚಾಲಯಕ್ಕೆ ಪದೇ ಪದೆ ಹೋಗಿದ್ದಕ್ಕೆ ಸಹೋದರಿಯರನ್ನು ಅಮಾನತು ಮಾಡಲಾಗಿದೆ. ಇದು ವಿಚಿತ್ರವಾದರೂ ಸತ್ಯ. ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ತರಾಕಾಪುರ ಗ್ರಾಮದಲ್ಲಿರುವ ಖಾಸಗಿ ಶಾಲೆಯಲ್ಲಿ ಇಂಥ ಹೇಯ ಘಟನೆ ನಡೆದಿದೆ.
ಸೆ.4ರಂದು ಪ್ರಧಾನಿ ಮೋದಿ ದೇಶಾದ್ಯಂತ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. ಲಖನೌದ ಖಾಸಗಿ ಶಾಲೆಯಲ್ಲಿಯೂ ಪ್ರಧಾನಿ ಭಾಷಣ ನೋಡುವ ವ್ಯವಸ್ಥೆ ಮಾಡಲಾಗಿತ್ತು. 4, 5 ಮತ್ತು ಆರನೇ ತರಗತಿಯಲ್ಲಿ ಕಲಿಯುತ್ತಿದ್ದ ಮೂವರು ಸೋದರಿಯರು ಪದೇ ಪದೆ ಶೌಚಾಲಯಕ್ಕೆ ತೆರುತ್ತಿದ್ದರು.
ಇದರಿಂದ ಕೋಪಗೊಂಡ ಅಧ್ಯಾಪಕರು ಮೂವರನ್ನು ಮನೆಗೇ ಕಳುಹಿಸಿದರು. ಮಕ್ಕಳ ಹೆತ್ತವರ ಪ್ರಕಾರ ಆ ದಿನ ಮೂವರಿಗೂ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ, ಆಗಾಗ ಶೌಚಕ್ಕೆ ತೆರಳುತ್ತಿದ್ದರು. ಆದರೆ, ಅಧ್ಯಾಪಕರು ಅದನ್ನು ಗಮನಿಸಲಿಲ್ಲ ಎಂದು ಆರೋಪಿಸಿದ್ದಾರೆ ಎಂದು ``ಮೈಲ್ ಟುಡೇ'' ವರದಿ ಮಾಡಿದೆ.
ಗಮನಾರ್ಹ ಅಂಶವೆಂದರೆ ಈ ಶಾಲೆಯಲ್ಲಿ 200 ವಿದ್ಯಾರ್ಥಿಗಳಿಗೆ ಇರುವುದು ಒಂದೇ ಶೌಚಾಲಯ. ಶುಲ್ಕ ಪಾವತಿಸಿಲ್ಲ: ಶಾಲೆಯ ಮುಖ್ಯೋಪಾಧ್ಯಾಯರ ಪ್ರಕಾರ ವಿದ್ಯಾರ್ಥಿಗಳ ಹೆತ್ತವರು ಶುಲ್ಕ ಪಾವತಿಸಿಲ್ಲ. ಹೀಗಾಗಿ, ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದಿದ್ದಾರೆ. ಆದರೆ ಹೆತ್ತವರು ಅದನ್ನು ತಿರಸ್ಕರಿಸಿದ್ದಾರೆ. ಶುಲ್ಕ ಪಾವತಿಯ ರಸೀತಿಯನ್ನೂ ತೋರಿಸಿದ್ದಾರೆ.