

ಕಾರವಾರ: ಕ್ಷಿಪಣಿ ಮತ್ತಿತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ `ವಜ್ರಕೋಶ್' ಕೇಂದ್ರವನ್ನು ಕಾರವಾರ ನೌಕಾನೆಲೆಯಲ್ಲಿ ರಕ್ಷಣಾ ಸಚಿವ ಮನೋಹರ ಪರ್ರಿಕರ್ ಬುಧವಾರ ಲೋಕಾರ್ಪಣೆ ಮಾಡಿದರು.
ಕಾರವಾರ ನೌಕಾನೆಲೆಯಲ್ಲಿ ಯುದ್ಧ ಹಡಗುಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಆಗಿಸುವ ಹಾಗೂ ತಾಂತ್ರಿಕ ನೆರವು ನೀಡುವ ಸಂಗ್ರಹಗಾರ ಇದು. ಕ್ಯಾ. ಅರವಿಂದ್ ಚಾರಿ ಅವರನ್ನು ವಜ್ರಕೋಶ್‍ನ ಪ್ರಥಮ ಕಮಾಂಡಿಂಗ್ ಆಫಿಸರ್ ಆಗಿ ನೇಮಿಸಲಾಗಿದೆ. ``ಸೀಬರ್ಡ್ ಎರಡನೇ `ಎ' ಹಂತದ ಕಾರ್ಯ ಮುಂದಿನ ವರ್ಷದಿಂದ ಆರಂಭವಾಗಲಿವೆ. `ವಜ್ರಕೋಶ್'ನಿಂದಾಗಿ ನೌಕಾಪಡೆ ಸಾಮಥ್ರ್ಯ ಹೆಚ್ಚಿದೆ. `ಐಎನ್‍ಎಸ್ ವಿಕ್ರಮಾದಿತ್ಯ' ಸಜ್ಜುಗೊಳ್ಳುತ್ತಿದ್ದು, ಇತ್ತೀಚೆಗೆ ಕಾರವಾರ ನೌಕಾನೆಲೆಯಲ್ಲಿ ಇದಕ್ಕೆ ಬರಾಕ್ ಮಿಸೈಲ್ ಅಳವಡಿಸಲಾಗಿದೆ. ಮುಂದಿನ ವಾರ ಕಾರ್ಯಾರಂಭ ಮಾಡಲಿದೆ ಎಂದರು.
ಆ.9ರ ಒಳಕೆ ನಿರಾಶ್ರಿತರ ಪಟ್ಟಿ ನೀಡಲು ಸೂಚನೆ
ಸೀಬರ್ಡ್ ನಿರಾಶ್ರಿತರಿಗೆ ಪರಿಹಾರ ಒದಗಿಸುವ ಸಂಬಂಧ ಅ. 9ರೊಳಗೆ ನಿರಾಶ್ರಿತರ ವರ್ಗೀಕರಣ ಪಟ್ಟಿ ನೀಡುವಂತೆ ರಕ್ಷಣಾ ಸಚಿವ ಮನೋಹರ ಪರ್ರಿಕರ್ ಸೂಚಿಸಿದ್ದಾರೆ. ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಪ್ರಕರಣಗಳ ಪಟ್ಟಿ ತಯಾರಿಸಿ ನೀಡಿದಲ್ಲಿ ಪರಿಹಾರಕ್ಕೆ ಕ್ರಮ ಸುಲಭವಾಗಲಿದೆ ಎಂದು ಸಚಿವರು ಹೇಳಿದರು.
ನಾಗರಿಕ ವಿಮಾನಯಾನ
ಎರಡನೇ ಹಂತದಲ್ಲಿ ಸೀಬರ್ಡ್ ನೌಕಾನೆಲೆ ವಿಸ್ತರಣೆ ಸಂದರ್ಭದಲ್ಲಿ ನಾಗರಿಕ ವಿಮಾನಯಾನಕ್ಕೂ ಅವಕಾಶ ಕಲ್ಪಿಸಲು ಜಿಲ್ಲಾಡಳಿತದಿಂದ ಮನವಿ ಮಾಡಲಾಯಿತು.
ರಕ್ಷಣಾತ್ಮಕ ಆಟ
``ಯಾವುದೇ ಅಂತಾರಾಷ್ಟ್ರೀಯ ವಿದ್ಯಮಾನ ಕುರಿತು ಪ್ರಶ್ನೆ ಕೇಳಬಾರದು '' ಎಂದು ಸುದ್ದಿಗೋಷ್ಠಿಗೂ ಮುನ್ನ ಪರ್ರಿಕರ್ ವರದಿಗಾರರಿಗೆ ತಾಕೀತು ಮಾಡಿದರು. ಪಾಕಿಸ್ತಾನ ಸತತವಾಗಿ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿರುವ ಬಗ್ಗೆ ಅವರು ಸದ್ಯಕ್ಕೆ ರಕ್ಷಣಾತ್ಮಕ ಆಟ ಆಡುತ್ತಿರುವುದು ಇದರಿಂದ ಸ್ಪಷ್ಟವಾಯಿತು. ದೇಶದ ಆಂತರಿಕ ವಿಷಯಗಳ ಕುರಿತು ಮಾತ್ರ ಅವರು ಮಾತನಾಡಿದರು.