

ನವದೆಹಲಿ: ಕೌಟುಂಬಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ದೆಹಲಿಯ ಮಾಜಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಸೆ.16 ರಂದು ದೆಹಲಿ ಪೊಲೀಸರೆದುರು ಶರಣಾಗಿದ್ದಾರೆ.
ಆಮ್ ಆದ್ಮಿ ಪಕ್ಷದ ಶಾಸಕರಾಗಿರುವ ಸೋಮನಾಥ್ ಭಾರ್ತಿ, ಸೆ.15 ರಂದು ನಿರೀಕ್ಷಣಾ ಜಾಮೀನು ಕೋರಿ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸೆ.17 ರ ವರೆಗೆ ಬಂಧನದಿಂದ ಮುಕ್ತಿ ದೊರೆತಿತ್ತು. ಆದರೆ ಬಂಧನದ ವಿರುದ್ಧ ರಕ್ಷಣೆ ದೊರೆತ ಮರುದಿನವೇ ಸೋಮನಾಥ್ ಭಾರ್ತಿ ಪೊಲೀಸರೆದುರು ಶರಣಾಗಿದ್ದಾರೆ.
ಪ್ರಕರಣದ ಬಗ್ಗೆ ಪಕ್ಷದ ವರಿಷ್ಠರೊಂದೊದಿಗೆ ಚರ್ಚೆ ನಡೆಸಿದ ಬಳಿಕ ಖುದ್ದು ಸೋಮನಾಥ್ ಭಾರ್ತಿ ಅವರೇ ಪೊಲೀಸ್ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿ ಶರಣಾಗಿದ್ದಾರೆ. ಒಂದು ವೇಳೆ ಬಂಧಿಸಿದರೆ, ಸೋಮನಾಥ್ ಭಾರ್ತಿ ಅವರು ಬಂಧನಕ್ಕೊಳಗಾದ ಆಮ್ ಆದ್ಮಿ ಪಕ್ಷದ 4 ಶಾಸಕರಾಗಲಿದ್ದಾರೆ.
ಕಳೆದ ನಾಲ್ಕು ತಿಂಗಳಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಜಿತೇಂದ್ರ ತೋಮರ್, ಮನೋಜ್ ಕುಮಾರ್, ಸುರೀಂದರ್ ಸಿಂಗ್ ವಿವಿಧ ಪ್ರಕರಣಗಳಲ್ಲಿ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.