

ಅಮೇಥಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಅವರ ಕುಟುಂಬದ ಬಗ್ಗೆಯಾಗಲೀ ಅಥವಾ ರಾಜೀವ್‌ಗಾಂಧಿ ಸೇವಾ ಸಂಸ್ಥೆ ಬಗ್ಗೆಯಾಗಲೀ ನಾನೇನಾದರೂ ತಪ್ಪು ಮಾತನಾಡಿದ್ದರೆ ಜೈಲಿಗೆ ಕಳುಹಿಸಲಿ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಲೋಕಸಭಾ ಕ್ಷೇತ್ರವಾದ ಉತ್ತರ ಪ್ರದೇಶದ ಅಮೇಥಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ತಮಗೆ ನೀಡಿರುವ ಲೀಗಲ್ ನೋಟಿಸ್ ಕುರಿತು ಪ್ರತಿಕ್ರಿಯಿಸಿದ ಅವರು, 'ನಾನು ಇಲ್ಲಿಗೆ ಭೇಟಿ ನೀಡಿದಾಗೆಲ್ಲಾ ಕೆಲವರಿಗೆ ಕಿರಿಕಿರಿಯಾಗುತ್ತದೆ. ಅದಕ್ಕೆಲ್ಲಾ ಹೆದರುವವಳು ನಾನಲ್ಲ. ಇಂತಹ ನೂರು ನೋಟಿಸ್ ಬಂದರೂ ಅಮೇಥಿ ಜನರ ಪರವಾಗಿ ಧ್ವನಿ ಎತ್ತುತ್ತೇನೆ, ನಾನು ಹೇಳಿರುವುದರಲ್ಲಿ ತಪ್ಪು ಇದ್ದರೇ ನನ್ನನ್ನು ಜೈಲಿಗೆ ಕಳುಹಿಸಲಿ ಆಗ ನಾನು ಸುಮ್ಮನಾಗುತ್ತೇನೆ,'' ಎಂದು ಬಹಿರಂಗ ಸವಾಲು ಹಾಕಿದರು.
ದೇಶದ ಮಹಿಳೆ ದುರ್ಬಲವಾಗಿದ್ದಾಳೆ ಎಂದು ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಪಕ್ಷ ಭಾವಿಸಿದ್ದರೆ ಅದನ್ನು ಮರೆಯುವುದು ಒಳ್ಳೆಯದು. ನಾನು ಹೆದರುವ ಮಹಿಳೆಯಲ್ಲ ಎಷ್ಟೇ ಸಂಕಷ್ಟದ ಸಮಯ ಬಂದಾಗಲೂ ಅಮೇಥಿ ಜನರ ಒಳಿತಿಗಾಗಿ ಹೋರಾಡುತ್ತೇನೆ,'' ಎಂದು ಸವಾಲು ಹಾಕಿದರು. .ಅಮೇಥಿ ಜನರಿಗೂ ಮತ್ತು ನನಗೂ ಇರುವುದು ಕೇವಲ ಚುನಾವಣಾ ಸಂಬಂಧವಲ್ಲ. ಒಬ್ಬ ಸಚಿವೆಯಾಗಿ ಇಲ್ಲಿನ ಜನರ ಸೇವೆ ಮಾಡುವುದು ನನ್ನ ಕರ್ತವ್ಯ,'' ಎಂದರು.
ರಾಜೀವ್‌ಗಾಂಧಿ ಚಾರಿಟಬಲ್ ಟ್ರಸ್ಟ್ ಉತ್ತರ ಪ್ರದೇಶದ ರೈತರ ಭೂಮಿಯನ್ನು ಅಕ್ರಮವಾಗಿ ಕಬಳಿಸುತ್ತಿದೆ ಎಂದು ಇರಾನಿ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಸಂಬಂಧ ಉತ್ತರ ಪ್ರದೇಶ ಕಾಂಗ್ರೆಸ್ ಘಟಕ ಇರಾನಿ ಅವರಿಗೆ ನೋಟಿಸ್ ನೀಡಿತ್ತು.