

ನವದೆಹಲಿ: ಕೌಟುಂಬಿಕ ದೌರ್ಜನ್ಯ ಹಾಗೂ ಕೊಲೆ ಯತ್ನ ಆರೋಪ ಎದುರಿಸುತ್ತಿರುವ ಆಮ್ ಆದ್ಮಿ ಪಕ್ಷದ ಶಾಸಕ ಹಾಗೂ ಮಾಜಿ ಸಚಿವ ಸೋಮನಾಥ್ ಭಾರ್ತಿ ಅವರನ್ನು ಸೋಮವಾರ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ನಿರೀಕ್ಷಣಾ ಜಾಮೀನು ಕೋರಿ ಸೋಮನಾಥ್ ಭಾರ್ತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮುಖ್ಯ ನಾಯಮೂರ್ತಿ ಎಚ್.ಎಲ್.ದತ್ತು ಹಾಗೂ ನ್ಯಾಯಮೂರ್ತಿ ಅಮಿತವ ರಾಯ್ ಅವರನ್ನೊಳಗೊಂಡ ಸುಪ್ರೀಂ ಪೀಠ, ಮೊದಲು ಇಂದು ಕೋರ್ಟ್ ಗೆ ಶರಣಾಗಿ, ನಂತರ ಜಾಮೀನು ಅರ್ಜಿ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಅಕ್ಟೋಬರ್ 1ಕ್ಕೆ ಮುಂದೂಡಿದೆ.
ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ಭಾರತಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಸಹ ವಜಾಗೊಳಿಸಿದ್ದು, ಭಾರ್ತಿ ಬಂಧನ ಬಹುತೇಕ ಖಚಿತವಾಗಿದೆ.
ಭಾರ್ತಿ ವಿರುದ್ಧ ಪತ್ನಿ ಲಿಪಿಕಾ ಭಾರ್ತಿ ಅವರು ತಮ್ಮ ಮೇಲೆ ದೈಹಿಕ ಹಾಗೂ ಮಾನಸಿಕ ಹಿಂಸೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.
ಸೋಮನಾಥ ಭಾರ್ತಿ ಮದುವೆಯಾದಾಗಿನಿಂದಲೂ ತಮಗೆ ದೈಹಿಕ ಹಿಂಸೆ ನೀಡುತ್ತಿದ್ದರು. ಅಲ್ಲದೆ ಒಮ್ಮೆ ಕೊಲೆಗೂ ಯತ್ನ ನಡೆಸಿದ್ದರು ಎಂದು ಲಿಪಿಕಾ ದೂರಿದ್ದಾರೆ.