

ನವದೆಹಲಿ: ಭಾರತ- ಫ್ರಾನ್ಸ್ ನಡುವಿನ ರಾಫೆಲ್ ಫೈಟರ್ ಜೆಟ್ ಖರೀದಿ ಅನಿಶ್ಚಿತವಾಗಿದ್ದು ಅಮೆರಿಕದ ಎಫ್/ಎ-18 ಸೂಪರ್ ಹಾರ್ನೆಟ್ ಫೈಟರ್ ಜೆಟ್ ವಿಮಾನ ಖರೀದಿಸುವ ಆಯ್ಕೆಯನ್ನು ಭಾರತ ಸರ್ಕಾರ ಪರಿಗಣಿಸಿದೆ ಎಂದು ತಿಳಿದುಬಂದಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತ ಸರ್ಕಾರ ಭಾರತೀಯ ವಾಯುಪಡೆಗೆ ಅಮೆರಿಕದ ಎಫ್/ಎ-18 ಸೂಪರ್ ಹಾರ್ನೆಟ್ ಫೈಟರ್ ಗಳನ್ನು ಪಡೆಯುವುದರ ಬಗ್ಗೆ ಯೋಚಿಸುತ್ತಿದೆ. ಅಮೆರಿಕ- ಭಾರತ ದ್ವಿಪಕ್ಷೀಯ ಸಂಬಂಧಗಳನ್ನು ಉತ್ತಮಗೊಳಿಸಲು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಷ್ ಕಾರ್ಟರ್ ಏ.10 ರಿಂದ 12 ವರೆಗೆ ಭಾರತ ಪ್ರವಾಸ ಕೈಗೊಂಡಿದ್ದಾರೆ ಈ ವೇಳೆ ಎಫ್/ಎ-18 ಸೂಪರ್ ಹಾರ್ನೆಟ್ ಫೈಟರ್ ಜೆಟ್ ವಿಮಾನ ಖರೀದಿ ಬಗ್ಗೆ ಮಾತುಕತೆ ನಿರೀಕ್ಷಿಸಲಾಗಿದೆ.
ಎಫ್/ಎ-18 ಸೂಪರ್ ಹಾರ್ನೆಟ್ ಫೈಟರ್ ಜೆಟ್ ವಿಮಾನ ಬೋಯಿಂಗ್ ನಿರ್ಮಿತವಾಗಿದೆ. ಈಗಾಗಲೇ ಬೋಯಿಂಗ್ ಕಂಪನಿಯ ಪ್ರತಿನಿಧಿಗಳು ಅಮೆರಿಕದ ಫೈಟರ್ ಜೆಟ್ ನ ಉತ್ಪಾದನಾ ಘಟಕ ನಿರ್ಮಾಣದ ರೂಪುರೇಷೆಗಳನ್ನು ಭಾರತ ಸರ್ಕಾರದೆದುರು ಪ್ರಸ್ತುತಪಡಿಸಿದ್ದಾರೆ. ಎಫ್-16 ಫೈಟರ್ ಜೆಟ್ ಗಳನ್ನು ಉತ್ಪಾದಿಸುವ ಲಾಕ್ಹೀಡ್ ಮಾರ್ಟಿನ್ ಕಂಪನಿಯೂ ಬೋಯಿಂಗ್ ಮಾದರಿಯಲ್ಲೇ ಭಾರತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗಿದೆ.