

ಮುಂಬೈ: ಐಪಿಎಲ್ ಟೂರ್ನಮೆಂಟ್ ನ ಮಧ್ಯಭಾಗದಲ್ಲಿ ಪಂದ್ಯಗಳನ್ನು ಬೇರೆ ಕಡೆಗೆ ಬದಲಾಯಿಸುವುದು ಅಷ್ಟು ಸುಲಭವಲ್ಲ ಎಂದು ಭಾರತೀಯ ಕ್ರಿಕೆಟ್ ಮಂಡಳಿ, ಬಿಸಿಸಿಐ ಹೇಳಿದೆ.
ಮಹಾರಾಷ್ಟ್ರದಲ್ಲಿ ತೀವ್ರ ಬರಗಾಲದಿಂದ ನೀರಿಗೆ ಕೊರತೆಯಿರುವುದರಿಂದ ಏಪ್ರಿಲ್ 30ರ ನಂತರ 13 ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಮುಂಬೈ ಹೈಕೋರ್ಟ್ ನಿನ್ನೆ ಬಿಸಿಸಿಐಗೆ ಆದೇಶ ನೀಡಿತ್ತು. ಮಹಾರಾಷ್ಟ್ರದ ಮುಂಬೈ, ಪುಣೆ ಮತ್ತು ನಾಗ್ಪುರಗಳಲ್ಲಿ ಐಪಿಎಲ್ ಪಂದ್ಯಾವಳಿ ನಿಗದಿಪಡಿಸಲಾಗಿದೆ.
ಐಪಿಎಲ್ ಪಂದ್ಯಾವಳಿಯನ್ನು ಆಯೋಜಿಸುವುದು ಕಠಿಣ ಕೆಲಸ. ಅಷ್ಟು ಸುಲಭವಲ್ಲ. ಮಹಾರಾಷ್ಟ್ರದಲ್ಲಿ ನಡೆಸಲು ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಕೊನೆ ಕ್ಷಣದಲ್ಲಿ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವುದೆಂದರೆ ಕಷ್ಟವಾಗುತ್ತದೆ ಎಂದರು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ.
ಹೈಕೋರ್ಟ್ ನ ಲಿಖಿತ ಆದೇಶ ಇನ್ನೂ ನಮ್ಮ ಕೈಸೇರಿಲ್ಲ. ಆದೇಶ ಸಿಕ್ಕಿದ ಬಳಿಕ ಅದನ್ನು ಅಧ್ಯಯನ ನಡೆಸಿ ಬದಲಿ ಉಪಾಯವನ್ನು ಮಾಡುತ್ತೇವೆ. ನ್ಯಾಯಾಲಯವನ್ನು ನಾವು ಯಾವತ್ತೂ ಗೌರವಿಸುತ್ತೇವೆ. ಇತರ ಫ್ರಾಂಚೈಸಿಗಳ ಜೊತೆಗೂ ನಾವು ಮಾತನಾಡುತ್ತೇವೆ. ಮಹಾರಾಷ್ಟ್ರದಲ್ಲಿ 19 ಪಂದ್ಯಗಳಲ್ಲಿ 13 ಪಂದ್ಯಗಳನ್ನು ಕೋರ್ಟ್ ಆದೇಶದ ಪ್ರಕಾರ ಬೇರೆಡೆಗೆ ಸ್ಥಳಾಂತರಿಸಬೇಕಿದೆ. ಈ ಬಗ್ಗೆ ನಾವು ಕಾರ್ಯಪ್ರವೃತ್ತವಾಗಬೇಕು ಎಂದು ಶುಕ್ಲಾ ಹೇಳಿದರು.
ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್, ಐಪಿಎಲ್ ಲೀಗ್ ಸುತ್ತ ನಕಾರಾತ್ಮಕ ಭಾವನೆ ಸೃಷ್ಟಿಸಲು ಪ್ರಯತ್ನ ನಡೆಯುತ್ತಿತ್ತು. ಕ್ರಿಕೆಟ್ ಪಿಚ್ ಗಾಗಿ ನಾವು ಕುಡಿಯುವ ನೀರನ್ನು ಬಳಸುತ್ತಿಲ್ಲ. ಬಳಕೆಗೆ ಯೋಗ್ಯವಲ್ಲದ ಶುದ್ದೀಕರಿಸಿದ ಚರಂಡಿ ನೀರನ್ನು ಬಳಸುವುದಾಗಿ ನ್ಯಾಯಾಲಯಕ್ಕೆ ಹೇಳಿದ್ದೇವೆ. 5 ಸ್ಟಾರ್ ಹೊಟೇಲ್ ಗಳಲ್ಲಿ ದೊಡ್ಡ ದೊಡ್ಡ ಸ್ವಿಮ್ಮಿಂಗ್ ಪೂಲ್ ಗಳಿರುತ್ತವೆ, ಅಲ್ಲಿ ಎಷ್ಟೊಂದು ನೀರು ಬಳಸುತ್ತಾರೆ, ಹಾಗಾದರೆ ಅವುಗಳನ್ನು ಮುಚ್ಚಿದ್ದಾರೆಯೇ? ಲಾನ್ ಗಳಿಗೆ ನೀರುಣಿಸುವುದನ್ನು ಜನರು ನಿಲ್ಲಿಸಿದ್ದಾರೆಯೇ, ಐಪಿಎಲ್ ಗೆ 0.00038 ಶೇಕಡಾದಷ್ಟು ಮಾತ್ರ ನೀರು ಬಳಸಲಾಗುತ್ತದೆ, ಇತ್ತೀಚಿನ ದಿನಗಳಲ್ಲಿ ಜನರು ಎಲ್ಲದರಲ್ಲಿಯೂ ನಕಾರಾತ್ಮಕ ಧೋರಣೆ ಹೊಂದಿದ್ದಾರೆ ಎಂದು ಠಾಕೂರ್ ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಮತ್ತು ಬರಗಾಲ ಪೀಡಿತ ಪ್ರದೇಶಗಳಿಗೆ ನೀರು ಪೂರೈಸಲು ಬಿಸಿಸಿಐ ಮುಂದೆ ಬಂದಿತ್ತು, ಆದರೆ ಇದೀಗ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವುದು ಕಷ್ಟವಾಗುತ್ತದೆ ಎನ್ನುತ್ತಾರೆ ರಾಜೀವ್ ಶುಕ್ಲಾ.
ಪಂದ್ಯಗಳನ್ನು ವರ್ಗಾಯಿಸಬೇಕೆಂದರೆ ಎಲ್ಲಿಗೆ ಮತ್ತು ಹೇಗೆ ಎಂಬೆಲ್ಲಾ ವಿಷಯಗಳು ಬರುತ್ತವೆ. ಟ್ವಂಟಿ-20 ವಿಶ್ವಕಪ್ ಪಂದ್ಯದ ವೇಳೆ ಇಲ್ಲದ ಅಪಸ್ವರ ಈಗ ಏಕೆ ಬಂತು. ಆರು ತಿಂಗಳು ಈ ಬಗ್ಗೆ ಯಾರೂ ಮಾತನಾಡಲಿಲ್ಲ. ಆಗ ಏನು ಅಗತ್ಯವಿತ್ತೋ ಅದನ್ನು ಮಾಡಲು ನಾವು ಸಿದ್ದವಿದ್ದೆವು. ಮಹಾರಾಷ್ಟ್ರದಲ್ಲಿ ಬೇರೆ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ ಮತ್ತು ಅದಕ್ಕೆ ನೀರು ಬಳಸಲಾಗುತ್ತದೆ.ಸಕ್ಕರೆ ಕಾರ್ಖಾನೆಗಳು ಮತ್ತು ಗಾಲ್ಫ್ ಕೋರ್ಸ್ ಗಳಿಗೂ ನೀರು ಸಾಕಷ್ಟು ಬೇಕಾಗುತ್ತದೆ. ಹಾಗಾದರೆ ಅವರು ಕೂಡ ಸಹಾಯ ಮಾಡಬೇಕಲ್ಲವೇ ಎಂದು ಕೇಳುತ್ತಾರೆ ಶುಕ್ಲಾ.
ಕಿಂಗ್ಸ್ 11 ಪಂಜಾಬ್ ಸಹ ಮಾಲೀಕ ನೆಸ್ ವಾಡಿಯಾ, ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂಬ ಕೋರ್ಟ್ ಆದೇಶವನ್ನು ಸ್ವಾಗತಿಸಿದ್ದು, ಬರಗಾಲ ಪೀಡಿತ ಪ್ರದೇಶಗಳ ಜನರ ಭಾವನೆಗಳನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.