

ನವದೆಹಲಿ: ಸೋಮವಾರಂದಿಂದ ಪ್ರಾರಂಭವಾಗುತ್ತಿರುವ ಸಂಸತ್ ಅಧಿವೇಶನದ ಹಿನ್ನೆಲೆಯಲ್ಲಿ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಭಾನುವಾರ ಸರ್ವಪಕ್ಷಗಳ ಸಭೆ ಕರೆದಿದ್ದು, ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಲಿದ್ದಾರೆ.
ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿರುವ ಕೇಂದ್ರದ ಕ್ರಮದ ವಿರುದ್ಧ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಲು ಸಿದ್ಧತೆ ನಡೆಸಿವೆ. ಹಾಗಾಗಿ ಸೋಮವಾರದಿಂದ ಆರಂಭವಾಗಲಿರುವ ಸಂಸತ್ ಕಲಾಪದಲ್ಲಿ ಈ ವಿಷಯ ಚರ್ಚೆಗೆ ಒಳಪಡಲಿದೆ.
ಜತೆಗೆ ಜಿಎಸ್ಟಿ ಮಸೂದೆಗೆ ಈ ಅಧಿವೇಶನದಲ್ಲಿ ಅಂಗೀಕರ ದೊರೆಯಬೇಕಿದ್ದು, ಕೇಂದ್ರ ಸರ್ಕಾರ ಜಿಎಸ್ಟಿ ಮಸೂದೆ ಅಂಗೀಕರಿಸಲು ಸರ್ವ ಪ್ರಯತ್ನ ನಡೆಸಲಿದೆ.
ಉತ್ತರಾಖಂಡ ರಾಜಕೀಯ ಪರಿಸ್ಥಿತಿ ಕುರಿತು ಚರ್ಚೆ ನಡೆಸಲು ವಿರೋಧ ಪಕ್ಷಗಳು ಈಗಾಗಲೇ ರಾಜ್ಯ ಸಬೆಯಲ್ಲಿ ನೋಟಿಸ್ ನೀಡಿವೆ. ಜತೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿವಿಧ ವಿರೋಧ ಪಕ್ಷಗಳ ನಾಯಕರನ್ನು ಭೇಟಿ ಮಾಡಿ ಉತ್ತರಾಖಂಡ ರಾಜಕೀಯ ಸ್ಥಿತಿ ಕುರಿತು ಚರ್ಚೆ ನಡೆಸಲು ಸಿದ್ಧತೆ ನಡೆಸಿದ್ದಾರೆ