

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಕೇಂದ್ರ ಸರ್ಕಾರ ಅಡ್ಡಿ ಉಂಟು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ದೆಹಲಿ ಸರ್ಕಾರದ ಆಡಳಿತ ವೈಖರಿಗೆ ಇಡೀ ವಿಶ್ವವೇ ಮೆಚ್ಚುಗೆ ಸೂಚಿಸುತ್ತಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ನಮ್ಮ ಪ್ರಯತ್ನಗಳಿಗೆ ಅಡ್ಡಿ ಉಂಟು ಮಾಡಲು ಯತ್ನಿಸುತ್ತಿದೆ ಇದರ ಹೊರತಾಗಿಯೂ ದೆಹಲಿ ಜನತೆಗಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆ ವೇಳೆ ಸಾರ್ವಜನಿಕರಿಗೆ ಅಗ್ಗದ ದರದಲ್ಲಿ ವಿದ್ಯುತ್ ನೀಡುವುದಾಗಿ ಹೇಳಿದ್ದೆವು. ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ಭರವಸೆಯನ್ನು ಈಡೇರಿಸಲಾಗಿದ್ದು ಅಗ್ಗದ ದರದಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇನ್ನು 20 ,000 ಲೀಟರ್ ಉಚಿತ ನೀರಿನ ಬಗ್ಗೆಯೂ ಆಮ್ ಆದ್ಮಿ ಪಕ್ಷ ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ನಾಯಕರು ಆಪ್ ನ ಭರವಸೆಗಳನ್ನು ಈಡೆರಿಸಲು ಪ್ರತಿನಿತ್ಯವೂ ಪ್ರಣಾಳಿಕೆಯನ್ನು ಗಮನಿಸುತ್ತಾರೆ. ಆದರೆ ಪ್ರತಿಪಕ್ಷಗಳು ನೀಡಿದ್ದ ಭರವಸೆಗಳನ್ನು ಮರೆಯುತ್ತವೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಏನನ್ನೂ ಮಾಡಿಲ್ಲ, ಎಲ್ಲವನ್ನೂ 2023 ವೇಳೆಗೆ ಮಾಡುತ್ತೇವೆ ಎಂದು ಹೇಳುತ್ತಾರೆ, ಏಕೆಂದರೆ ಅಲ್ಲಿಯವರೆಗೆ ಅಧಿಕಾರದಲ್ಲಿರುವುದಿಲ್ಲ ಎಂಬುದು ಅವರಿಗೆ ತಿಳಿದಿದೆ ಎಂದು ಕೇಜ್ರಿವಾಲ್ ಲೇವಡಿ ಮಾಡಿದ್ದಾರೆ.