

ನವದೆಹಲಿ: ಲೆಫ್ಟಿನೆಂಟ್ ಗೌರ್ನರ್ ದೆಹಲಿಯ ಆಡಳಿತಾತ್ಮಕ ಮುಖ್ಯಸ್ಥ ಎಂಬ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿದೆ.
ಇನ್ನೊಂದು ವಾರದೊಳಗೆ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ದೆಹಲಿ ಸರ್ಕಾರ ತೀರ್ಮಾನಿಸಿದೆ ಎಂದು ಸುಪ್ರೀಂ ಕೋರ್ಟ್ ನ ನ್ಯಾ. ಎನ್.ವಿ ರಮಣ ಹಾಗೂ ನ್ಯಾ.ಎ.ಕೆ ಸಿಕ್ರಿ ಅವರ ವಿಭಾಗೀಯ ಪೀಠ ದೆಹಲಿ ಸರ್ಕಾರದ ಅರ್ಜಿಯನ್ನು ವಿಚಾರಣೆ ನಡೆಸಿರುವುದಾಗಿ ಹೇಳಿದೆ ಎಂದು ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ತಿಳಿಸಿದ್ದಾರೆ.
ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಲು ದೆಹಲಿ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು ಒಂದು ವಾರದ ಅವಧಿಯಲ್ಲಿ ದೆಹಲಿ ನ್ಯಾಯಾಲಯದ ತೀರ್ಪನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ ಎಂದು ಇಂದಿರಾ ಜೈಸಿಂಗ್ ಮಾಹಿತಿ ನೀಡಿದ್ದಾರೆ. ದೆಹಲಿಯ ಲೆಫ್ಟಿನೆಂಟ್ ಗವರ್ನರ್(ಎಲ್ಜಿ) ಅಧಿಕಾರಗಳನ್ನು ಪ್ರಶ್ನಿಸಿ ಆಪ್ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಜಿ ರೋಹಿಣಿ ಮತ್ತು ಜಯಂತ್ ನಾಥ್ ಅವರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿ, ಲೆಫ್ಟಿನೆಂಟ್ ಗವರ್ನರ್ ದೆಹಲಿಯ ಆಡಳಿತಾತ್ಮಕ ಮುಖ್ಯಸ್ಥ ಎಂದು ಮಹತ್ವದ ತೀರ್ಪು ನೀಡಿತ್ತು.