

ನವದೆಹಲಿ: ಬಹಶಃ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯಷ್ಟೇ ಅಲ್ಲ, ಅವರ ಸ್ವಾತಂತ್ರ್ಯೋತ್ಸವದ ಭಾಷಣ ಕೂಡ ಇಷ್ಟವಿಲ್ಲ ಎಂದು ಕಾಣುತ್ತದೆ. ಅತ್ತ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ದೆಹಲಿಯ ಕೆಂಪುಕೋಟೆಯಲ್ಲಿ ಭಾಷಣ ಮಾಡುತ್ತಿದ್ದರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಎಂ ಅರವಿಂದೇ ಕೇಜ್ರಿವಾಲ್ ನಿದ್ದೆಗೆ ಜಾರಿದ್ದರು.
ಇಡೀ ದೇಶವೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಆಲಿಸುತ್ತಿದ್ದರೆ, ಅತ್ತ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ನಿದ್ದೆಗೆ ಜಾರಿರುವ ಸಂಗತಿ ಇದೀಗ ಸಾಮಾಜಿಕ ಜಾಲತಾಣಗಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಬಗ್ಗೆ ಫೇಸ್ ಬುಕ್, ವಾಟ್ಸಪ್ ಹಾಗೂ ಟ್ವಿಟರ್ ನಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತೆ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು, ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ವೈರಲ್ ಆಗುತ್ತಿದ್ದಂತೆಯೇ ಇತ್ತ ಟ್ವೀಟ್ ಮಾಡಿರುವ ಮನೀಷ್ ಸಿಸೋಡಿಯಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ನಿಜಕ್ಕೂ ನೀರಸವಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೆ ಕೇವಲ ಕೇಜ್ರಿವಾಲ್ ಅಷ್ಟೇ ಅಲ್ಲ ಸ್ವತಃ ಬಿಜೆಪಿ ಮುಖಂಡರು ಕೂಡ ನಿದ್ರೆಗೆ ಜಾರಿದ್ದರು ಎಂದು ಮತ್ತೊಂದು ಫೋಟೋ ಕುರಿತು ಹೇಳಿದ್ದಾರೆ.
ನಿದ್ರೆಗೆ ಜಾರಿದ್ದ ಕೇಂದ್ರ ಸಚಿವರು ಹಾಗೂ ಬಿಜೆಪಿ ಮುಖಂಡರು
ಸುಧೀರ್ಘ 90 ನಿಮಿಷಕ್ಕೂ ಅಧಿಕ ಸಮಯ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಿದ್ದು, ಈ ವೇಳೆ ಕೇವಲ ಅರವಿಂದ್ ಕೇಜ್ರಿವಾಲ್ ಅವರಷ್ಟೇ ಅಲ್ಲ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ವಿತ್ತ ಸಚಿವ ಅರುಣ್ ಜೇಟ್ಲಿ ಸೇರಿದಂತೆ ಕೆಲ ಬಿಜೆಪಿ ಹಿರಿಯ ಮುಖಂಡರು ಕೂಡ ನಿದ್ರೆಗೆ ಜಾರಿದ್ದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.