

ಮುಂಬಯಿ: 70 ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಬಲೂಚಿಸ್ತಾನದ ಬಗ್ಗೆ ಪ್ರಸ್ತಾಪಿಸಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿರುವ ಕಾಂಗ್ರೆಸ್, ಬಲೂಚಿಸ್ತಾನಕ್ಕಾಗಿ ಮೋದಿ ಕಾಶ್ಮೀರವನ್ನು ತ್ಯಾಗ ಮಾಡಲಿದ್ದಾರೆಯೇ ಎಂದು ಪ್ರಶ್ನಿಸಿದೆ.
ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದ ಜೊತೆ ಬಲೂಚಿಸ್ತಾನವನ್ನು ಹೋಲಿಕೆ ಮಾಡುತ್ತಿರುವುದಕ್ಕೆ ಆಶ್ಚರ್ಯ ವ್ಯಕ್ತ ಪಡಿಸಿರುವ ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮಾ, ಎರಡು ಸಮಸ್ಯೆಗಳನ್ನು ಒಟ್ಟೊಟ್ಟಿಗೆ ಕೊಂಡೊಯ್ಯುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ಮೋದಿ ಪ್ರತಿಬಾರಿ ಕಾಶ್ಮೀರ ವಿಷಯ ಮಾತನಾಡುವಾಗ ಅದರ ಜೊತೆಗೆ ಬಲೂಚಿಸ್ತಾನ ವಿಷಯವನ್ನು ಪ್ರಸ್ತಾಪಿಸುತ್ತಾರೆ. ಇದು ಕಾಳಜಿ ವಹಿಸುವಂತಹ ವಿಚಾರವೇ ಎಂದು ಪ್ರಶ್ನಿಸಿರುವ ಅವರು ವಾಸ್ತವವಾಗಿ ಇದೊಂದು ಭಯ ಹುಟ್ಟಿಸುವ ವಿಷಯವಾಗಿದೆ ಎಂದು ಹೇಳಿದ್ದಾರೆ.
ಕಾಶ್ಮೀರ ವಿವಾದವನ್ನು ಬಲೂಚಿಸ್ತಾನದ ಜೊತೆ ಹೋಲಿಕೆ ಮಾಡುವುದು ಸರಿಯಲ್ಲ. ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಮೋದಿ ಕಾಶ್ಮೀರವನ್ನು ತ್ಯಾಗ ಮಾಡಲು ಮುಂದಾಗಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.