

ಹೈದರಾಬಾದ್: ಜಾಗ್ವಾರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಪುತ್ರ ನಿಖಿಲ್ ಗೆ ಹಾರೈಸುವಂತೆ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಭೇಟಿ ಮಾಡಿ ಕೋರಿದ್ದಾರೆ.
ಹೈದರಾಬಾದ್ ನ ಪವನ್ ಕಲ್ಯಾಣ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಕುಮಾರಸ್ವಾಮಿ ಜಾಗ್ವಾರ್ ಚಿತ್ರದ ಟ್ರೈಲರ್ ಅನ್ನು ಸ್ಮಾರ್ಟ್ ಫೋನ್ ಮೂಲಕ ತೋರಿಸಿದರು. ಟ್ರೈಲರ್ ನೋಡಿದ ಪವನ್ ಚಿತ್ರದ ಕುರಿತಂತೆ ಮೆಚ್ಚುಗೆಯ ಮಾತುಗಳನ್ನು ಹಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದೇ ವೇಳೆ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ವೈಯಕ್ತಿಕ 10 ಲಕ್ಷ ನಗದು ಬಹುಮಾನ ನೀಡುತ್ತೇನೆ ಎಂದು ಕುಮಾರಸ್ವಾಮಿ ಘೋಷಿಸಿದ್ದು, ಜಾಗ್ವಾರ್ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದ ವೇಳೆ ಸಿಂಧು ಅವರಿಗೆ ನಗದು ಬಹುಮಾನ ನೀಡುತ್ತೇನೆ ಎಂದು ಹೇಳಿದ್ದಾರೆ
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು ನಾನು ರಾಜಕೀಯ ಉದ್ದೇಶದೊಂದಿಗೆ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿಲ್ಲ ಪುತ್ರ ನಿಖಲ್ ಅಭಿನಯದ ಜಾಗ್ವಾರ್ ಚಿತ್ರಕ್ಕೆ ಬೆಂಬಲ ನೀಡುವಂತೆ ಕೋರಿದ್ದಾಗಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.