ಪ್ರಧಾನಿಗಿಂತ ಹೆಚ್ಚು ಸಿಬ್ಬಂದಿ ಹೊಂದಿರುವ ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ!
ದೆಹಲಿ ಮಹಿಳಾ ಆಯೋಗದ ಸಮಿತಿಗೆ ಅಕ್ರಮ ನೇಮಕಾತಿ ನಡೆಸಿದ್ದ ಆರೋಪದ ಬೆನ್ನಲ್ಲೇ, ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿ ಸರ್ಕಾರದ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದ್ದು, ದೆಹಲಿ ಡಿಸಿಎಂ ಪ್ರಧಾನಿ ಮೋದಿಗಿಂತಲೂ ಹೆಚ್ಚಿನ ಸಿಬ್ಬಂದಿ ಹೊಂದಿದ್ದಾರೆ ಎಂಬುದು ಬಹಿರಂಗವಾಗಿದೆ.
ನವದೆಹಲಿ: ದೆಹಲಿ ಮಹಿಳಾ ಆಯೋಗದ ಸಮಿತಿಗೆ ಅಕ್ರಮ ನೇಮಕಾತಿ ನಡೆಸಿದ್ದ ಆರೋಪದ ಬೆನ್ನಲ್ಲೇ, ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿ ಸರ್ಕಾರದ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದ್ದು, ದೆಹಲಿ ಡಿಸಿಎಂ ಪ್ರಧಾನಿ ಮೋದಿಗಿಂತಲೂ ಹೆಚ್ಚಿನ ಸಿಬ್ಬಂದಿ ಹೊಂದಿದ್ದಾರೆ ಎಂಬುದು ಬಹಿರಂಗವಾಗಿದೆ.
ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಪ್ರಧಾನಿ ನರೇಂದ್ರ ಮೋದಿ ಅವರಿಗಿಂತಲೂ ಹೆಚ್ಚಿನ ಸಿಬ್ಬಂದಿಗಳನ್ನು ಹೊಂದಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತನೊಬ್ಬನ ದೂರು ನೀಡಿದ್ದರು, ದೂರಿನ ಅನ್ವಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆ ಕೈಗೊಂಡಿದ್ದು ವಿಚಾರಣೆ ನಡೆಸುತ್ತಿದೆ.
ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಕಳೆದ ಒಂದು ವರ್ಷದಲ್ಲಿ ತಮ್ಮ ಕಚೇರಿಗೆ ಜವಾನ (ಪಿಯೂನ್) ಹಾಗೂ ವಿಶೇಷ ಕರ್ತವ್ಯಾಧಿಕಾರಿಗಳ (ಒಎಸ್ ಡಿ) ಹುದ್ದೆಗಳಿಗೆ ಒಟ್ಟು 63 ಜನರನ್ನು ನೇಮಕ ಮಾಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ 39 ಸಿಬ್ಬಂದಿಗಳನ್ನು ಹೊಂದಿದ್ದರೆ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮಾತ್ರ ಪ್ರಧಾನಿ ಮೋದಿ ಅವರಿಗಿಂತ ಹೆಚ್ಚು ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಎಸಿಬಿ ಮುಖ್ಯಸ್ಥ ಮುಖೇಶ್ ಕುಮಾರ್ ಮೀನಾ ಹೇಳಿದ್ದಾರೆ. ಮನೀಷ್ ಸಿಸೋಡಿಯಾ ಅವರ ವಿರುದ್ಧ ದೂರು ಬಂದಿದ್ದು ತನಿಖೆ ನಡೆಸುತ್ತೇವೆ ಎಂದು ಎಸಿಬಿ ಮುಖ್ಯಸ್ಥರು ಹೇಳಿದ್ದಾರೆ. ದೆಹಲಿ ಡಿಸಿಎಂ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಲು ದೆಹಲಿ ಸರ್ಕಾರದ ವಕ್ತಾರ ನಾಗೇಂದ್ರ ಶರ್ಮಾ ನಿರಾಕರಿಸಿದ್ದಾರೆ.