

ಚೆನ್ನೈ: ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ಹೃದಯಾಘಾತವಾದ ವಿಚಾರ ತಿಳಿಯುತ್ತಿದ್ದಂತೆಯೇ ಚೆನ್ನೈನ ಆಪೋಲೋ ಆಸ್ಪತ್ರೆಯತ್ತ ಭಾರಿ ಪ್ರಮಾಣದಲ್ಲಿ ಅಭಿಮಾನಿಗಳು ಧಾವಿಸುತ್ತಿರುವ ಹಿನ್ನಲೆಯಲ್ಲಿ ಭಾರಿ ಪ್ರಮಾಣದ ಪೊಲೀಸರನ್ನು ನಿಯೋಜಿಸಲಾಗಿದೆ.
ಜಯಲಲಿತಾಗೆ ಹೃದಯಾಘಾತವಾದ ವಿಚಾರ ತಿಳಿಯುತ್ತಿದ್ದಂತೆಯೇ ನಿನ್ನೆ ರಾತ್ರಿಯಿಂದಲೇ ಅಪೋಲೋ ಆಸ್ಪತ್ರೆಯತ್ತ ಸಾವಿರಾರು ಅಭಿಮಾನಿಗಳು ಧಾವಿಸುತ್ತಿದ್ದು, ಅವರನ್ನು ನಿಯಂತ್ರಿಸಲು ಸುಮಾರು 500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಅಪೋಲೋ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲೇ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಸುಮಾರು 800 ಮೀಟರ್ ದೂರದಿಂದಲೇ ಬ್ಯಾರಿಕೇಡ್ ಗಳನ್ನು ಹಾಕಿ ಜನರನ್ನು ನಿಯಂತ್ರಿಸಲಾಗುತ್ತಿದೆ.
ಡಿಐಜಿ ಅನ್ಬುಕುಮಾರ್ ಅವರ ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿದ್ದು, ಪೊಲೀಸರು ಹಾಗೂ ಆಸ್ಪತ್ರೆ ವೈದ್ಯರ ವಾಹನಗಳನ್ನು ಹೊರತು ಪಡಿಸಿ ಯಾವುದೇ ರೀತಿಯ ಖಾಸಗಿ ವಾಹನಗಳಿಗೆ ಆಸ್ಪತ್ರೆ ಆವರಣದಲ್ಲಿ ಪ್ರವೇಶ ನಿರಾಕರಿಸಲಾಗುತ್ತಿದೆ. ಆಸ್ಪತ್ರೆ ಸಮೀಪದ ಗ್ರೀನ್ಸ್ ರಸ್ತೆಯಲ್ಲೇ ವಾಹನಗಳನ್ನು ತಡೆಯುತ್ತಿರುವ ಪೊಲೀಸರು ವಾಹನಗಳನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಅಲ್ಲದೆ ಅಪೊಲೋ ಆಸ್ಪತ್ರೆಯ ಎಲ್ಲ 8 ಗೇಟ್ ಗಳಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಪೊಲೀಸರು ಸಜ್ಜಾಗಿ ನಿಂತಿದ್ದಾರೆ.