

ಚೆನ್ನೈ: ಪ್ರಮುಖ ಬೆಳವಣಿಗೆಯೊಂದರಲ್ಲಿ ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಆಪ್ತ ಗೆಳತಿ ಶಶಿಕಲಾ ಅವರಿಗೆ ಎಐಎಡಿಎಂಕೆ ಪಕ್ಷದ ಸಾರಥ್ಯ ವಹಿಸುವ ಕುರಿತು ಮಾತುಗಳು ಕೇಳಿಬರುತ್ತಿದ್ದು, ಶಶಿಕಲಾ ಅವರಿಗೆ ಪಕ್ಷದ ಕಾರ್ಯದರ್ಶಿ ಹುದ್ದೆ ನೀಡುವ ಕುರಿತೆ ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸೋಮವಾರ ತಡರಾತ್ರಿ ಅಂದರೆ ಜಯಾ ಅವರ ಆಪ್ತ ಒ ಪನ್ನೀರ್ ಸೆಲ್ವಂ ಅವರು ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಎಐಎಡಿಎಂಕೆ ಪಕ್ಷದ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಶಶಿಕಲಾ ಅವರನ್ನು ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಇದಕ್ಕೆ ಇಂಬು ನೀಡುವಂತೆ ಶಶಿಕಲಾ ಅವರೂ ಕೂಡ ಜಯಾ ಅಂತಿಮ ಯಾತ್ರೆ ವೇಳೆ ಹಾಗೂ ಅವರ ಅಂತ್ಯ ಸಂಸ್ಕಾರದಲ್ಲಿ ಸಂಪೂರ್ಣವಾಗಿ ಪಾಲ್ಗೊಂಡು ವಿಧಿವಿಧಾನಗಳನ್ನು ನೆರವೇರಿಸಿದ್ದರು.
ಈ ಎಲ್ಲ ಬೆಳವಣಿಗೆಗಳನ್ನು ಮತ್ತು ಪಕ್ಷದಲ್ಲಿನ ಆಂತರಿಕ ಚಟುವಟಿಕೆಗಳನ್ನು ಅವಲೋಕಿಸುತ್ತಿರುವ ರಾಜಕೀಯ ತಜ್ಞರು ಜಯಾ ಆಪ್ತೆ ಶಶಿಕಲಾ ಅವರಿಗೆ ಪಕ್ಷದ ಸಾರಥ್ಯ ನೀಡುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಶಶಿಕಲಾ ಅವರಿಗೆ ಪಕ್ಷದ ಸಾರಥ್ಯ ನೀಡುವ ಉದ್ದೇಶದಿಂದಲೇ ಅವರಿಗೆ ಕಾರ್ಯದರ್ಶಿ ಹುದ್ದೆ ನೀಡುವ ಮೂಲಕ ಅಧಿಕೃತ ಸ್ಥಾನ ನೀಡಲು ಪಕ್ಷದ ಮುಖಂಡರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಶಶಿಕಲಾ ಜಯಲಲಿತಾ ಅವರ ಆಪ್ತಗೆಳತಿಯಾಗಿದ್ದು, ಕಳೆದ ಹಲವು ವರ್ಷಗಳಿಂದ ಪೊಯೆಸ್ ಗಾರ್ಡನ್ ನಲ್ಲಿರುವ ಜಯಾ ನಿವಾಸದಲ್ಲೇ ಶಶಿಕಲಾ ಹಾಗೂ ಅವರ ಕುಟುಂಬ ತಂಗಿದ್ದಾರೆ. ಅಲ್ಲದೆ ಜಯಾ ಅವರ ಮೇಲ್ವಿಚಾರಣೆಯನ್ನೂ ಕೂಡ ಇವರೇ ನಿರ್ವಹಿಸುತ್ತಿದ್ದರು. ಹಲವು ಕಾರ್ಯಕ್ರಮಗಳಲ್ಲಿ ಸ್ವತಃ ಜಯಲಲಿತಾ ಅವರೇ ಶಶಿಕಲಾ ಅವರನ್ನು ತಮ್ಮ ಸಹೋದರಿ ಎಂದು ಕರೆದಿದ್ದರು. ಇದೀಗ ಶಶಿಕಲಾ ಅವರಿಗೆ ಪಕ್ಷದ ಸಾರಥ್ಯ ವಹಿಸಲು ಎಲ್ಲ ಸಿದ್ಧತೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯಿಂದ ಪರಿಸ್ಥಿತಿ ಸೂಕ್ಷ್ಮ ಅವಲೋಕನ
ಇನ್ನು ತಮಿಳುನಾಡಿನ ರಾಜಕೀಯ ಬೆಳವಣಿಗೆಗಳನ್ನು ಬಿಜೆಪಿ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಬಿಜೆಪಿ ಸರ್ಕಾರದಿಂದ ನೇಮಕವಾಗಿರುವ ತಮಿಳುನಾಡು ಹಂಗಾಮಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ತಮಿಳುನಾಡಿನ ಪ್ರಸ್ತುತ ಬೆಳವಣಿಗೆಗಳ ಕುರಿತು ಕೇಂದ್ರ ಬಿಜೆಪಿ ನಾಯಕರಿಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ನಿನ್ನೆ ಜಯಾ ಅಂತಿಮ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ ಅವರು ಶಶಿಕಲಾ ಅವರ ತಲೆ ನೇವರಿಸಿ ಸಾಂತ್ವನ ಹೇಳಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಟಾರೆ ಪಕ್ಷದ ಅಧಿನಾಯಕಿ ಜಯಲಲಿತಾರನ್ನು ಕಳೆದುಕೊಂಡಿರುವ ಎಐಎಡಿಎಂಕೆ ಪಕ್ಷಕ್ಕೆ ಮುಂದಿನ ಅಧಿಪತಿ ಯಾರು ಎಂಬುದೇ ಇದೀಗ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.