ಜಯಾ ನಿಧನ: ಸಿಎಂ ಪನ್ನೀರ್ ಸೆಲ್ವಂ ಮುಂದಿದೆ ದುರ್ಗಮ ಹಾದಿ!

ಪನ್ನೀರ್ ಸೆಲ್ವಂ ತಮಿಳುನಾಡು ಸರ್ಕಾರದ ಚುಕ್ಕಾಣಿ ಹಿಡಿದಿದ್ದು, ಒಂದೆಡೆ ಸುಗಮ ಆಡಳಿತ ಹಾಗೂ ಮತ್ತೊಂದೆಡೆ ಪಕ್ಷದ ಭಿನ್ನಮತೀಯ ಚಟುವಟಿಕೆಗಳನ್ನು ಹಣಿಯುವ ಜವಾಬ್ದಾರಿ ಪನ್ನೀರ್ ಸೆಲ್ವಂ ಅವರ ಮೇಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಅಧಿನಾಯಕಿ ಜೆ ಜಯಲಲಿತಾ ಅವರ ಮರಣಾನಂತರ ಜಯಾ ಅವರ ಆಪ್ತ ಓ ಪನ್ನೀರ್ ಸೆಲ್ವಂ ತಮಿಳುನಾಡು ಸರ್ಕಾರದ ಚುಕ್ಕಾಣಿ ಹಿಡಿದಿದ್ದು, ಒಂದೆಡೆ ಸುಗಮ  ಆಡಳಿತ ಹಾಗೂ ಮತ್ತೊಂದೆಡೆ ಪಕ್ಷದ ಭಿನ್ನಮತೀಯ ಚಟುವಟಿಕೆಗಳನ್ನು ಹಣಿಯುವ ಜವಾಬ್ದಾರಿ ಪನ್ನೀರ್ ಸೆಲ್ವಂ ಅವರ ಮೇಲಿದೆ.

ಪ್ರಸ್ತುತ ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಎಂದರೆ 29 ವರ್ಷಗಳ ಹಿಂದೆ ಹೇಗಿತ್ತೊ ಅದೇ ರೀತಿಯ ವಿಷಮ ಪರಿಸ್ಥಿತಿ ಎದುರಾಗಿದೆ. ಅಂದು ಪಕ್ಷ ಮತ್ತು ತಮಿಳುನಾಡು ಸರ್ಕಾರದ ನೊಗ ಹತ್ತಿದ್ದ ಎಂಜಿ ರಾಮಚಂದ್ರನ್  ನಿಧನರಾಗಿದ್ದರು. ಇದೀಗ ಮತ್ತದೇ ಪರಿಸ್ಥಿತಿ ಪಕ್ಷಕ್ಕೆ ಎದುರಾಗಿದ್ದು ಜಯಾ ನಿಧನ ಬಳಿಕ ಅಂತಹ ಪ್ರಭಾವಿ ನಾಯಕರಿಲ್ಲದೇ ಎಐಎಡಿಎಂಕೆ ಪಕ್ಷ ಮತ್ತೆ ಅತಂತ್ರ ಸ್ಥಿತಿಯಲ್ಲಿದೆ. ಜಯಲಲಿತಾ ಅವರು ನಿಧನರಾದ ಕೆಲವೇ  ಗಂಟೆಗಳಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪನ್ನೀರ್ ಸೆಲ್ವಂ ಅವರು ಹಿಂದೆಂದಿಗಿಂತ ಹೆಚ್ಚಿನ ಸವಾಲುಗಳನ್ನು ಈಗ ಎದುರಿಸಬೇಕಾಗಿ ಬಂದಿದೆ.

ಈ ಹಿಂದೆಯೂ ಕೂಡ ಎರಡು ಬಾರಿ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರಾದರೂ, ಅಂದು ಜಯಾ ಅವರ ಬೆನ್ನಿಗೆ ನಿಂತು ಆಡಳಿತ ಸುಗಮನಾಗುವಂತೆ ನೋಡಿಕೊಂಡಿದ್ದರು. ಆದರೆ ಈ ಬಾರಿ  ಜಯಲಲಿತಾ ಅವರು ಇಲ್ಲದೇ ಪನ್ನೀರ್ ಸೆಲ್ವಂ ಹೇಗೆ ಅಧಿಕಾರ ನಡೆಸಲಿದ್ದಾರೆ ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ. ರಾಜಕೀಯ ತಜ್ಞರ ಪ್ರಕಾರ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿದ್ದಾರೆಯಾದರೂ ಪಕ್ಷದಲ್ಲಿ ಅವರಿಗೆ ಗಟ್ಟಿ  ನೆಲೆ ಇಲ್ಲ. ಜಯಲಲಿತಾ ಅವರ ಆಪ್ತರೆಂಬ ಒಂದೇ ಕಾರಣದಿಂದ ಇಲ್ಲಿಯವರೆಗೂ ಅವರನ್ನು ಜಯಾ ಅವರ ಉತ್ತರಾಧಿಕಾರಿ ಎಂದು ಬಿಂಬಿಸಲಾಗುತ್ತಿತ್ತು. ಆದರೆ ಇದೀಗ ಅವರ ಬೆನ್ನಿಗೆ ನಿಲ್ಲಲು ಜಯಲಲಿತಾ ಅವರಿಲ್ಲ. ಹೀಗಾಗಿ  ಅವರ ವಿರುದ್ಧ ಯಾವುದೇ ಕ್ಷಣದಲ್ಲಿ ಶಾಸಕರು ಮತ್ತು ಮುಖಂಡರು ತಿರುಗಿ ಬೀಳುವ ಸಾಧ್ಯತೆ ಇದೆ. ಜಯಾ ನಿಧನದ ಬಳಿಕ ಹಲವು ಮುಖಂಡರು ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಇದೀಗ ಈ ಎಲ್ಲ ಮುಖಂಡರನ್ನು  ಸಂಭಾಳಿಸಿಕೊಂಡು ಸುಗಮ ಆಡಳಿತ ನೀಡುವುದು ಪನ್ನೀರ್ ಸೆಲ್ವಂ ಅವರ ಮುಂದಿರುವ ದೊಡ್ಡ ಸವಾಲಾಗಿದೆ.

ತಮಿಳುನಾಡಿನಲ್ಲಿ ಅಣ್ಣಾಡಿಎಂಕೆ ಅಧಿಕಾರಾವಧಿ ಇನ್ನೂ ನಾಲ್ಕೂವರೆ ವರ್ಷಗಳ ಕಾಲ ಇದ್ದು,  ಪನ್ನೀರ್ ಸೆಲ್ವಂ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಉಳಿದ ಅವಧಿಗೂ ಇರುತ್ತಾರೆಯೇ ಅಥವಾ ಅವರನ್ನು ಹಂಗಾಮಿ ಸಿಎಂ ಎಂದು  ಆಯ್ಕೆ ಮಾಡಲಾಗಿದೆಯೇ ತಿಳಿದಿಲ್ಲ. ಹೀಗಾಗಿ ಎಡಿಎಂಕೆ ಪಕ್ಷ ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತದೆ ಎಂಬ ಕುರಿತು ಹಲವು ಅನುಮಾನಗಳು ಮೂಡುತ್ತಿದೆ. ಒಂದು ವೇಳೆ ಪನ್ನೀರ್ ಸೆಲ್ವಂ ಪೂರ್ಣ ಪ್ರಮಾಣದ ಸಿಎಂ ಆಗಿ  ನೇಮಕವಾಗಿದ್ದರೆ, ಅವರು ಜಯಲಲಿತಾ ಅವರ ಮಾದರಿಯಲ್ಲೇ ಪಕ್ಷ ಮುನ್ನಡೆಸಬೇಕಿದ್ದರೆ ಮೃದು ಸ್ವಭಾವದ ಅವರು ಸಂಪೂರ್ಣವಾಗಿ ರೂಪಾಂತಗೊಳ್ಳಲೇಬೇಕಿದೆ. ಪ್ರಸ್ತುತ ಸನ್ನಿವೇಶದಲ್ಲಿ ಇದು ಅಸಾಧ್ಯ ಎಂಬ ಮಾತುಗಳು  ಕೇಳಿಬರುತ್ತಿವೆ.

ಇನ್ನು ಎಐಎಡಿಎಂಕೆ ಪಕ್ಷ ಶಕ್ತಿ ಸ್ಥಾನ ಮತ್ತು ಪಕ್ಷದ ಪರಮೋಚ್ಛ ಹುದ್ದೆ ಎಂದೇ ಬಿಂಬಿತವಾಗಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸರ್ವಾನುಮತದಿಂದ ಹೊಸಬರನ್ನು ಆಯ್ಕೆ ಮಾಡುವುದು ಕೂಡ ಅಷ್ಟು ಸುಲಭವಲ್ಲ. ಹಿಂದೆ  ಈ ಎರಡೂ ಸ್ಥಾನಗಳನ್ನು ಜಯಲಲಿತಾ ನಿರಾಯಾಸವಾಗಿ ನಿಭಾಯಿಸಿದ್ದರು. ಆದರೆ ಈಗ ಜಯಾ ಅನುಪಸ್ಥಿತಿ ಖಂಡಿತಾ ಪಕ್ಷಕ್ಕೆ ಕಾಡಲಿದೆ. ಜಯಲಲಿತಾ ಅವರ ದಶಕಗಳ ಆಪ್ತ ಗೆಳತಿ ಶಶಿಕಲಾ, ನಂಬಿಕಸ್ಥ ಆಡಳಿತ ಸಲಹೆಗಾರ್ತಿ  ಶೀಲಾ ಬಾಲಕೃಷ್ಣನ್‌, ಜಯಾ ಆದೇಶಗಳನ್ನು ಶಿರಸಾವಹಿಸಿ ಪಾಲಿಸುತ್ತಿದ್ದ ಹಾಲಿ ಸಿಎಂ ಪನ್ನೀರ ಸೆಲ್ವಂ, ಲೋಕಸಭೆಯ ಉಪಸ್ಪೀಕರ್‌ ತಂಬಿದೊರೈ, ಸಚಿವ ಎಡಪ್ಪಾಡಿ ಪಳನಿಸ್ವಾಮಿ ಅವರು ಅಣ್ಣಾಡಿಎಂಕೆಯ ನೊಗ ಹೊರಲು  ಅತೀವ ಆಸಕ್ತಿ ಹೊಂದಿದ್ದಾರೆ. ಆದರೆ ಇವರ ಪೈಕಿ ಒಬ್ಬರನ್ನು ಆಯ್ಕೆಮಾಡುವುದು ದೊಡ್ಡ ಸವಾಲೇ ಸರಿ. ಶಶಿಕಲಾ ಹಾಗೂ ಪನ್ನೀರ ಸೆಲ್ವಂ ಅವರು ದಕ್ಷಿಣ ತಮಿಳುನಾಡಿನ ಪ್ರಭಾವಿ ಥೇವಾರ್‌ ಸಮುದಾಯಕ್ಕೆ ಸೇರಿದವರಾಗಿದ್ದು,  ಅವರಿಗೆ ಪಟ್ಟ ಕಟ್ಟಲು ಪಶ್ಚಿಮ ತಮಿಳುನಾಡಿನ ಪ್ರಬಲ ಗೌಂಡರ್‌ ಸಮುದಾಯದ ನಾಯಕರು ಎಲ್ಲಿ ವಿರೋಧ ವ್ಯಕ್ತಪಡಿಸುತ್ತಾರೋ ಎಂಬ ಆತಂಕ ಕೂಡ ಇದೆ.

ಅಂತೆಯೇ ಈ ಹಿಂದೆ ಪನ್ನೀರ್ ಸೆಲ್ವಂ ಎರಡು ಭಾರಿ ಮುಖ್ಯಮಂತ್ರಿ ಆಧಿಕಾರ ಅನುಭವಿಸಿದ್ದಾರೆ. ಹೀಗಾಗಿ ಈ ಬಾರಿ ಪಕ್ಷದ ಅಧ್ಯಕ್ಷ ಹುದ್ದೆಯನ್ನು ಗೌಂಡರ್ ಸಮುದಾಯ ಕೇಳಿದರೂ ಅಚ್ಚರಿಯಿಲ್ಲ. ಆ ಸಮುದಾಯದಿಂದ  ತಂಬಿದುರೈ ಹಾಗೂ ಎಡಪ್ಪಾಡಿ ಪಳನಿಸ್ವಾಮಿ ಮುಂಚೂಣಿಯಲ್ಲಿದ್ದಾರೆ. ಈ ಪೈಕಿ ಬಿಜೆಪಿಯು ತಂಬಿದುರೈಗೆ ಬೆಂಬಲವಾಗಿ ನಿಂತಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿದ್ದೇ ಆದರೆ ಖಂಡಿತಾ ಪಕ್ಷದಲ್ಲಿ ಭಿನ್ನಮತಗಳು ಏರ್ಪಡುತ್ತವೆ.  ಅಗ ಪಕ್ಷ ಹೋಳಾಗಿ ಪಕ್ಷದ ಪ್ರಾಬಲ್ಯ ಕುಂಠಿತವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇತ್ತ ಪಕ್ಷವನ್ನು ಸಂಭಾಳಿಸುವುದು ಒಂದೆಡೆಯಾದರೆ ಮತ್ತೊಂದೆಡೆ ಆಡಳಿತ ನಿರ್ವಹಣೆ ಕೂಡ ಪನ್ನೀರ್ ಸೆಲ್ವಂ ಅವರಿಗೆ ಕಬ್ಬಿಣದ ಕಡಲೆಯಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಈ ಹಿಂದೆ ಸಿಎಂ ಜಯಲಲಿತಾ  ಅವರು ತಮಿಳುನಾಡು ಜನತೆಗೆ ಸಾಕಷ್ಟು ಯೋಜನೆಗಳನ್ನು ಘೋಷಿಸಿದ್ದರು. ಈ ಎಲ್ಲ ಯೋಜನೆಗಳನ್ನು ಪನ್ನೀರ್ ಸೆಲ್ವಂ ಕೂಡ ಸಮರ್ಪಕವಾಗಿ ನಿಭಾಯಿಸಬೇಕು. ಪ್ರಮುಖವಾಗಿ ತಮಿಳುನಾಡು ಮಾತ್ರವಲ್ಲದೇ ದೇಶಾದ್ಯಂತ  ಖ್ಯಾತಿ ಪಡೆದಿರುವ ಅಮ್ಮಾ ಬ್ರಾಂಡ್ ಯೋಜನೆಗಳಿಗೆ ಯಾವುದೇ ಕಾರಣಕ್ಕೂ ಹಣದ ಕೊರತೆ ಎದುರಾಗದಂತೆ ನೋಡಿಕೊಳ್ಳುವ ಪ್ರಮುಖ ಜವಾಬ್ದಾರಿ ಪನ್ನೀರ್ ಸೆಲ್ವಂ ಮೇಲಿದೆ. ಇದಲ್ಲದೇ ಕರ್ನಾಟಕದೊಂದಿಗಿನ ಕಾವೇರಿ  ವಿಚಾರ ಕೂಡ ಪನ್ನೀರ್ ಸೆಲ್ವಂ ಅವರಿಗೆ ದೊಡ್ಡ ಸವಾಲಾಗಿದ್ದು, ಕೇಂದ್ರದೊಂದಿಗೆ ಸಮನ್ವಯ ಕಾಪಾಡಿಕೊಂಡು ತಮಿಳುನಾಡಿಗೆ ನೀರು ಒದಗಿಸುವ ಬಹುದೊಡ್ಡ ಸವಾಲನ್ನು ಪನ್ನೀರ್ ಸೆಲ್ವಂ ಎದುರಿಸಬೇಕಿದೆ. ಇದೂ ಕೂಡ  ಪನ್ನೀರ್ ಸೆಲ್ವಂ ಅವರಿಗೆ ಕಬ್ಬಿಣದ ಕಡಲೆಯಾಗಿದ್ದು, ಈ ಎಲ್ಲ ಸವಾಲುಗಳನ್ನು ಅವರು ಹೇಗೆ ನಿಭಾಯಿಸಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com