ಹುರಿಯತ್'ಗೆ ಬೆಂಬಲ: ಹೇಳಿಕೆಗೆ ನಾನೇಕೆ ಕ್ಷಮೆಯಾಚಿಸಬೇಕು ಎಂದ ಫರೂಖ್ ಅಬ್ದುಲ್ಲಾ

ಹುರಿಯತ್ ಕುರಿತಂತೆ ನೀಡಿದ್ದ ನನ್ನ ಹೇಳಿಕೆ ಸರಿಯಾಗಿದ್ದು, ಹೇಳಿಕೆ ಕುರಿತಂತೆ ನಾನೇಕೆ ಕ್ಷಮೆಯಾಚಿಸಬೇಕೆಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಖ್ ಅಬ್ದುಲ್ಲಾ...
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಖ್ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಖ್ ಅಬ್ದುಲ್ಲಾ

ಜಮ್ಮು: ಹುರಿಯತ್ ಕುರಿತಂತೆ ನೀಡಿದ್ದ ನನ್ನ ಹೇಳಿಕೆ ಸರಿಯಾಗಿದ್ದು, ಹೇಳಿಕೆ ಕುರಿತಂತೆ ನಾನೇಕೆ ಕ್ಷಮೆಯಾಚಿಸಬೇಕೆಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಖ್ ಅಬ್ದುಲ್ಲಾ ಅವರು ಗುರುವಾರ ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಫರೂಖ್ ಅಬ್ದುಲ್ಲಾ ಅವರು, ಬಹು ವರ್ಷಗಳಿಂದಿರುವ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಪ್ರತ್ಯೇಕತಾವಾದಿಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತ್ಯೇಕತಾವಾದಿಗಳಿಗೆ ನಾನು ಬೆಂಬಲ ವ್ಯಕ್ತಪಡಿಸುತ್ತೇನೆ. ಕಾಶ್ಮೀರ ಸಮಸ್ಯೆ ಬಗೆಹರಿಕೆಗೆ ಪ್ರತ್ಯೇಕತಾವಾದಿಗಳೊಂದಿಗೆ ನಾನು ಕೈಜೋಡಿಸುತ್ತೇನೆಂದು ಹೇಳಿದ್ದರು.

ಈ ಹೇಳಿಕೆಗೆ ಇಂದು ಸ್ಪಷ್ಟನೆ ನೀಡಿರುವ ಅವರು, ಪ್ರತ್ಯೇಕತಾವಾದಿಗಳ ಪರವಾಗಿ ನೀಡಿದ್ದ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಹೇಳಿಕೆ ಸಂಬಂಧ ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವುದಿಲ್ಲ. ಕಾಶ್ಮೀರ ಸಮಸ್ಯೆ ಬಗೆಹರಿಕೆ ಕುರಿತಂತೆ ಅಲ್ಲಿನ ಜನತೆ ಒಂದಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುವುದಾಗಿ ಹೇಳಿದ್ದೆ. ಹೇಳಿಕೆ ಸಂಬಂಧ ನಾನೇಕೆ ಕ್ಷಮೆಯಾಚಿಸಬೇಕೆಂದು ಪ್ರಶ್ನಿಸಿದ್ದಾರೆ.

ಕಾಶ್ಮೀರ ಸಮಸ್ಯೆ ಬಗೆಹರಿಯುವುದು ನಿಮಗೆ ಬೇಡವೇ? ಗಡಿಯಲ್ಲಿ ಪದೇಪದೇ ಬಾಂಬ್ ಸ್ಫೋಟಗೊಳ್ಳಬೇಕೇ? ಮುಗ್ಧ ಜನರು ಸಾಯುವುದು ನಿಮಗೆ ಬೇಕೇ?...ಕಾಶ್ಮೀರದ ಎರಡೂ ಗಡಿಯಲ್ಲಿರುವ ಜನರು ಇಂದು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಸಮಸ್ಯೆ ಬಗೆಹರಿಕೆಗೆ ನಾವು ಕೈಜೋಡಿಸಿದ್ದೇವೆಂದು ಹೇಳಿದ್ದಾರೆ.

ಜಮ್ಮು, ಕಾಶ್ಮೀರದ ಹಾಗೂ ಲಡಾಕ್ ನಲ್ಲಿರುವ ಜನರೊಂದಿಗೆ ಭಾರತ ಮಾತುಕತೆ ನಡೆಸುವ ಅಗತ್ಯವಿದೆ. ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸದೆಯೇ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಹೇಗೆ ಸಾಧ್ಯೆ? ಉಭಯ ರಾಷ್ಟ್ರಗಳು ಮಾತುಕತೆ ನಡೆಸುವ ಅಗತ್ಯವಿದೆ ಹಾಗೂ ಕೇಂದ್ರ ಸರ್ಕಾರ ಜಮ್ಮು, ಲಡಾಖ್ ಹಾಗೂ ಕಾಶ್ಮೀರದ ಜನತೆಯೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು, ಕೇವಲ ನನ್ನನ್ನೇ ಏಕೆ ದೂಷಿಸುತ್ತಿದ್ದೀರಿ?... ಆಡಳಿತಾರೂಢ ಬಿಜೆಪಿ-ಪಿಡಿಪಿ ಹುರಿಯತ್ ಸೇರಿದಂತೆ ಪ್ರತೀಯೊಬ್ಬರೊಂದಿಗೂ ಮಾತುಕತೆ ನಡೆಸುತ್ತಿದೆ. ಕಾಶ್ಮೀರ ಸಮಸ್ಯೆ ಬಗೆಹರಿಕೆಯಲ್ಲಿ ಹುರಿಯತ್ ಜೊತೆಗೂ ಮಾತುಕತೆ ನಡೆಸಬೇಕೆಂದು ರಾಜ್ಯ ಸರ್ಕಾರವೇ ಹೇಳಿರುವಾಗ, ನನ್ನನ್ನು ಯಾವ ಕಾರಣಕ್ಕೆ ದೂಷಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com